ಬೈಂದೂರು : ಸಿದ್ದಾಪುರದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾಗಾಂಧಿ ವಸತಿ ಶಾಲೆ ಹಾಗೂ ಸೌಡ ಅಗ್ರಹಾರದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ. ಅಂಬೇಡ್ಕರ್ ವಸತಿ ಶಾಲೆಯ ಕಾಮಗಾರಿಯನ್ನು ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಹಾಗೂ ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಒಟ್ಟಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆದಷ್ಟು ಶೀಘ್ರವಾಗಿ ಕಾಮಗಾರಿ ನಡೆಸಿ, ವಿದ್ಯಾರ್ಥಿಗಳ ಅನುಕೂಲಕ್ಕೆ ಉಪಯೋಗ ಆಗುವಂತೆ ಮಾಡಬೇಕು. ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯೇ ಪ್ರಮುಖವಾಗಿದ್ದು ನಿರ್ಮಾಣ ಹಂತದಲ್ಲಿಯೇ ಇದಕ್ಕೆ ಆದ್ಯತೆ ನೀಡಬೇಕು. ಕಲಿಕೆ ಪೂರಕವಾದ ವಾತಾವರಣವು ಹಾಸ್ಟೆಲ್ ಗಳಲ್ಲಿ ಇರಬೇಕಾದರೆ ಸೌಲಭ್ಯವೂ ಚೆನ್ನಾಗಿರಬೇಕು. ಈ ನಿಟ್ಟಿನಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಬೇಕು ಎಂದು ಇಂಜಿನಿಯರ್ ಗಳಿಗೆ ತಿಳಿಸಿದರು
ಉಡುಪಿ, ಕುಂದಾಪುರ, ಬೈಂದೂರಿನ ವಿದ್ಯಾಸಂಸ್ಥೆಗಳಿಗೆ ರಾಜ್ಯದ ವಿವಿಧ ಜಿಲ್ಲೆಯ ವಿದ್ಯಾರ್ಥಿಗಳು ಕಲಿಕೆಗೆ ಬರುತ್ತಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಹಾಸ್ಟೆಲ್ ನಿರ್ಮಾಣ ಆಗಬೇಕು. ಬಡ, ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳಿಗೆ ಹಚ್ಚು ಅನುಕೂಲವಾಗಲಿದೆ ಎಂದರು.
ಸಿದ್ಧಾಪುರದಲ್ಲಿ ನಿರ್ಮಾಣವಾಗುತ್ತಿರುವ ವಸತಿ ಶಾಲೆ ಮುಂದಿನ ತಿಂಗಳು ಉದ್ಘಾಟನೆಗೆ ಸಿದ್ಧವಾಗಲಿದೆ, ಸೌಡದ ವಸತಿ ಶಾಲೆಯ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲಿದ್ದೇವೆ ಎಂಬ ಮಾಹಿತಿಯನ್ನು ಇಂಜಿನಿಯರ್ ಗಳು ನೀಡಿದರು.
ಶಂಕರನಾರಾಯಣ ಗ್ರಾ.ಪಂ. ಅಧ್ಯಕ್ಷ ಉಮೇಶ್ ಶೆಟ್ಟಿ ಕಲ್ಗದ್ದೆ, ಪ್ರಮುಖರಾದ ರವಿ ಕುಲಾಲ್, ಅಶೋಕ್ ಅಂಪಾರ್, ಗೋಪಾಲ್ ಕಾಂಚನ್, ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲರು, ಇಂಜಿನಿಯರ್ ಗಳು ಉಪಸ್ಥಿತರಿದ್ದರು.