ಬೈಂದೂರು : ಗ್ಯಾರಂಟಿ ಯೋಜನೆಯನ್ನೂ ಸಮರ್ಪಕವಾಗಿ ಅನುಷ್ಠಾನ ಮಾಡದೇ, ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ನೀಡದೇ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರಿಗೆ ದೊಡ್ಡ ಆರ್ಥಿಕ ಹೊರ ನೀಡುತ್ತಿದೆ. ರಾಜ್ಯ ಸರ್ಕಾರ ತಕ್ಷಣವೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ ಗಂಟಿಹೊಳೆಯವರು ಆಗ್ರಹಿಸಿದ್ದಾರೆ.
ಲೋಕಸಭೆ ಚುನಾವಣೆ ಪೂರ್ವದಲ್ಲಿ ಚೊಂಬು ಜಾಹೀರಾತು ನೀಡಿ, ಈಗ ರಾಜ್ಯದ ಜನತೆಗೆ ಚೊಂಬು ನೀಡುತ್ತಿರುವುದು ಯಾರು ಎಂಬುದು ಜನ ಸಾಮಾನ್ಯರಿಗೂ ಅರ್ಥವಾಗುತ್ತಿದೆ . ಲೋಕಸಭಾ ಚುನಾವಣೆಯ ಚುನಾವಣಾ ಫಲಿತಾಂಶದ ಸೋಲಿನ ಹತಾಶೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಮೇಲೆ ತೋರಿಸುತ್ತಿದೆ.
ಪೆಟ್ರೋಲ್ ಬೆಲೆಯನ್ನು 3 ರೂಪಾಯಿ ಹಾಗೂ ಡೀಸೆಲ್ ಬೆಲೆಯನ್ನು 3.5 ರೂಪಾಯಿಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಿರುವುದು ಕಾಂಗ್ರೆಸ್ಸಿನ ಜನವಿರೋಧಿ ನೀತಿಗೆ ಹಿಡೊದ ಕೈಗನ್ನಡಿಯಾಗಿದೆ.
ಚುನಾವಣಾ ಪೂರ್ವದಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ಆ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಜನರಿಗೆ ಬೆಲೆ ಏರಿಕೆ ಬರೆ ಹಾಕುತ್ತಿರುವುದು ಖಂಡನೀಯ. ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ಹೊರಡಿಸಿ ಪೆಟ್ರೋಲ್ ಬೇರಿ ಬೆಲೆಯ ಕುರಿತು ಮೋದಿ ಸರ್ಕಾರ ಹಾಗೂ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವನ್ನು ಟೀಕಿಸಿತ್ತು.
ಇದೀಗ ಲೋಕಸಭಾ ಚುನಾವಣೆ ಸೋಲಿನ ಹತಾಶೆಗೆ ಒಳಗಾಗಿರುವ ಕಾಂಗ್ರೆಸ್ ನಾಯಕರು ರಾಜ್ಯದ ಜನತೆಗೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಬರೆ ಎಳೆದಿದ್ದಾರೆ.
ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ ಮತ್ತು ಡೀಸೆಲ್ ಬೆಲೆ 3.50 ರೂ. ಹೆಚ್ಚಳ ಮಾಡಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿರುವುದು ಖಂಡನೀಯ.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಕಾಂಗ್ರೆಸ್ ನಾಯಕರೇ ಗ್ಯಾರಂಟಿ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ರಾಜ್ಯದ ಖಜಾನೆ ಖಾಲಿಯಾಗಿದ್ದು, ತುಂಬಿಸಲು ಜನ ಸಾಮಾನ್ಯರ ಜೇಬಿಗೆ ಕೈ ಹಾಕಿರುವುದರ ಪರಿಣಾಮವನ್ನು ಸರ್ಕಾರ ಎದುರಿಸಬೇಕಾಗುತ್ತದೆ. ರಾಜ್ಯ ಸರ್ಕಾರದ ಜನ ವಿರೋಧಿ ನಿಲುವಿಗೆ ಜನರೇ ಉತ್ತರ ನೀಡಲಿದ್ದಾರೆ ಎಂದು ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಪ್ರಕಟನೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.