ಚಿತ್ರದುರ್ಗ: ನಟ ದರ್ಶನ್ ಗ್ಯಾಂಗ್ನಿಂದ ಹತ್ಯೆಗೀಡಾಗಿರುವ ರೇಣುಕಾಸ್ವಾಮಿಯವರ ಕುಟುಂಬಕ್ಕೆ ಧೈರ್ಯ ತುಂಬುವ ಕಾರ್ಯವನ್ನು ರಾಜ್ಯ ಸರಕಾರಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ಚಿತ್ರದುರ್ಗದಲ್ಲಿರುವ ರೇಣುಕಾಸ್ವಾಮಿ ಯವರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರೇಣುಕಾಸ್ವಾಮಿಯವರ ಹತ್ಯೆ ಒಂದು ಅಮಾನವೀಯ ಕೃತ್ಯ. ನಾಗರಿಕ ಸಮಾಜದ ಯಾರೂ ಕೂಡ ಇದನ್ನು ಬೆಂಬಲಿಸಲು ಸಾಧ್ಯವಿಲ್ಲ. ರೇಣುಕಾಸ್ವಾಮಿಯವರ ಪತ್ನಿ ನಾಲ್ಕು ತಿಂಗಳ ಗರ್ಭಿಣಿ. ಮುಂದಿನ ದಿನಗಳಲ್ಲಿ ಆ ಹೆಣ್ಣು ಮಗಳಿಗೆ ಒಂದು ಸರಕಾರಿ ಉದ್ಯೋಗ ನೀಡಬೇಕು ಜೊತೆಗೆ ಸರ್ಕಾರ ಪರಿಹಾರವನ್ನೂ ಕೊಡಬೇಕು ಎಂದು ಆಗ್ರಹಿಸಿದರು.
ಯಾವುದೇ ಒತ್ತಡಕ್ಕೆ ಮಣಿಯದೆ, ತಪ್ಪಿತಸ್ಥರಿಗೆ, ಕೊಲೆಗಡುಕರಿಗೆ ಸರಿಯಾದ ಶಿಕ್ಷೆ ಆಗುವ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಸಂಸದ ಗೋವಿಂದ ಕಾರಜೋಳ, ಶಾಸಕ ಎಂ.ಚಂದ್ರಪ್ಪ ಮಾಜಿ ಶಾಸಕ ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಜಿಲ್ಲಾಧ್ಯಕ್ಷ ಮುರಳಿ, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಮುಖಂಡರಾದ ಎಸ್.ಲಿಂಗಮೂರ್ತಿ ಉಪಸ್ಥಿತರಿದ್ದರು.