ಕುಂದಾಪುರ : ಸಂಸ್ಥೆಯಿಂದ ತೆರಳಿದ ನಂತರದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ ಅಧಿಕವಾಗಿದ್ದು, ನಿಮ್ಮ ಸಂಸ್ಥೆಯನ್ನುಪ್ರೀತಿಸುವ ಮೂಲಕ ಸಮಾಜದಲ್ಲಿ ಉನ್ನತ ಮಟ್ಟಕ್ಕೇರಿದಾಗಲೂ ಸಂಸ್ಥೆಯನ್ನು ಮರೆಯದಿರಿ. ಕಲಿತ ವಿದ್ಯೆ, ಪಡೆದ ಜ್ಞಾನ ವಿದ್ಯಾರ್ಥಿಗಳ ಭವಿಷ್ಯವನ್ನು ಸುಂದರವಾಗಿಸಲಿ ಎಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ| ಕೆ. ಚಂದ್ರಶೇಖರ್ ಶೆಟ್ಟಿ ಹೇಳಿದರು.
ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಪ್ರಸ್ತಾವಿಸಿದರು.
ಅಂತಿಮ ಪದವಿ ವಿದ್ಯಾರ್ಥಿಗಳಾದ ಶೈನಿ ಡಿ’ಸೋಜಾ, ರಶ್ಮಿ ಉಡುಪ, ಅಭಿನಯ ಶೆಟ್ಟಿ, ಶಮಿತಾ ಶೆಟ್ಟಿ, ವಿನಯ್ ಕುಮಾರ್, ಅಪೇಕ್ಷಾ, ಲಕ್ಷ್ಮೀಕಾಂತ್ ಅನಿಸಿಕೆ ಹಂಚಿಕೊಂಡರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ಭಟ್, ನಿರ್ವಹಣಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ನಂದಾ ರೈ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಶ್ರೀ ಮಹೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ಪ್ರೀತಿ ಹೆಗ್ಡೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಸ್ಕಂದ ಛಾತ್ರ, ಚೇತನ್ ಶೆಟ್ಟಿ ಉಪಸ್ಥಿತರಿದ್ದರು.
ವಾಣಿಜ್ಯ ಪ್ರಾಧ್ಯಾಪಕಿ ಶ್ವೇತಾ ಭಂಡಾರಿ ಅತಿಥಿಯನ್ನು ಪರಿಚಯಿಸಿದರು. ಗ್ರಂಥಪಾಲಕ ಶ್ರೀ ಮಹೇಶ್ ನಾಯಕ್ ವಂದಿಸಿ, ಕನ್ನಡ ಪ್ರಾಧ್ಯಾಪಕಿ ರೇಷ್ಮಾ ಶೆಟ್ಟಿ ನಿರೂಪಿಸಿದರು. ವಿದ್ಯಾರ್ಥಿ ಶ್ರೀಶಾಂತ್ ಪ್ರಾರ್ಥಿಸಿದರು.