ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ವೈಜ್ಞಾನಿಕ ಸಾಕ್ಷಿಗಳ ಮೂಲಕ ನಟ ದರ್ಶನ್ ಗ್ಯಾಂಗ್‌ಗೆ ಕಾನೂನಿನ ಕುಣಿಕೆ ಬಿಗಿಗೊಳಿಸಲು ಮುಂದಾಗಿರುವ ಪೊಲೀಸರು, ಈಗ ಆರೋಪಿಗಳಿಗೆ ಡಿಎನ್ಎ ಪರೀಕ್ಷೆ ನಡೆಸಿದ್ದಾರೆ ರಾಷ್ಟ್ರಮಟ್ಟದಲ್ಲಿ ಸಾರ್ವಜನಿಕವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಕನ್ನಡ ಚಲನಚಿತ್ರ ರಂಗದ ಸ್ಟಾರ್ ನಟ ದರ್ಶನ್ ವಿರುದ್ದ ಕೊಲೆ ಪ್ರಕರಣದಲ್ಲಿ ಡಿಎನ್‌ಐ ಪರೀಕ್ಷೆ ಮಹತ್ವ ಪಡೆದುಕೊಂಡಿದೆ
ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳನ್ನುಪೊಲೀಸರು ಕರೆತಂದು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ.ಈ ವೇಳೆ ಡಿಎನ್‌ಎ ಪರೀಕ್ಷೆ ಸಲುವಾಗಿ ಆರೋಪಿಗಳ ರಕ್ತ ಹಾಗೂ ಕೂದಲು ಸಂಗ್ರಹಿಸಲಾಗಿದೆ. ಇವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ರವಾನಿಸಲಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ನಡೆದ ಪಟ್ಟಣಗೆರೆ ಶೆಡ್‌ನಲ್ಲಿ ಹಾಗೂ ಕೃತ್ಯ ನಡೆದ ದಿನ ಆರೋಪಿಗಳು ಧರಿಸಿದ್ದ ಉಡುಪುಗಳಲ್ಲಿ ಪತ್ತೆಯಾದ ಕೂದಲು ಸೇರಿದಂತೆ ಇತರೆ ಪುರಾವೆಗಳ ಆಧರಿಸಿ ಪೊಲೀಸರು ಡಿಎನ್‌ಎ ಪರೀಕ್ಷೆ ನಡೆಸಿದ್ದಾರೆ. ಈಗ ಆರೋಪಿಗಳಿಂದ ಸಂಗ್ರಹಿಸುವ ಕೂದಲು ಹಾಗೂ ರಕ್ತದ ಮಾದರಿಗೂ ಕೃತ್ಯ ನಡೆದ ಸ್ಥಳದಲ್ಲಿ ಪತ್ತೆಯಾದ ಕೂದಲುಗಳಿಗೂ ತಾಳೆ ಮಾಡಿ ಎಫ್‌ಎಸ್‌ಎಲ್ ತಜ್ಞರು ವರದಿ ನೀಡಲಿದ್ದಾರೆ. ಅವುಗಳು ಹೋಲಿಕೆಯಾದರೆ ಆರೋಪ ಸಾಬೀತು ಪಡಿಸಲು ಪೊಲೀಸರಿಗೆ ವೈಜ್ಞಾನಿಕವಾಗಿ ಪ್ರಬಲ ಸಾಕ್ಷ್ಯ ಲಭಿಸಿದಂತಾಗುತ್ತದೆ ಎಂದು ಮೂಲಗಳು ತಿಳಿಸಿವೆ.