Home » ಗೆಲುವು ಕಾರ್ಯಕರ್ತರ ಪರಿಶ್ರಮದ ಕೊಡುಗೆ
 

ಗೆಲುವು ಕಾರ್ಯಕರ್ತರ ಪರಿಶ್ರಮದ ಕೊಡುಗೆ

ಸಂಸದ ಬಿ.ವೈ.ರಾಘವೇಂದ್ರ

by Kundapur Xpress
Spread the love

ಹೆಮ್ಮಾಡಿ : ಕಾರ್ಯಕರ್ತರೇ ನನ್ನ ಪ್ರೇರಣಾ ಶಕ್ತಿ.‌ ಅವರಿಂದಲೇ ನಾನು ನಾಲ್ಕುಬಾರಿ ಸಂಸದನಾಗಿ ಜನ ಸೇವೆ ಮಾಡಲು ಸಾಧ್ಯವಾಗಿದೆ. ಈ ಬಾರಿಯ ಗೆಲುವು ಕಾರ್ಯಕರ್ತರ ಪರಿಶ್ರಮದ ಕೊಡುಗೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಬಣ್ಣಿಸಿದರು.
ಬಿಜೆಪಿ ಬೈಂದೂರು ಮಂಡಲ ಇಂದು ಹೆಮ್ಮಾಡಿಯ ಜಯಶ್ರೀ ಸಭಾ ಭವನದಲ್ಲಿ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಸತತ ಐವತ್ತು ದಿನಕ್ಕೂ ಅಧಿಕ ಸಮಯ ಮೀಸಲಿಟ್ಟು ಹಗಲಿರುಳು ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗೆ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಹಿತೈಷಿಗಳಿಗೆ ಹೃದಯ ಪೂರ್ವಕವಾಗಿ ಕೃತಜ್ಞತೆ ತಿಳಿಸಲು ಹಮ್ಮಿಕೊಂಡಿದ್ದ “ಕೃತಜ್ಞತಾ – ಅಭಿನಂದನಾ ಸಮಾರಂಭ” ದಲ್ಲಿ ಪಾಲ್ಗೊಂಡು, ನೆರೆದಿದ್ದ ಆತ್ಮೀಯ ದೇವದುರ್ಲಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕರ್ತರು ಈ ಗೆಲುವಿಗಾಗಿ ಹಗಲಿರುಳು ದುಡಿದಿದ್ದಾರೆ. ಅವರ ಪರಿಶ್ರಮವೇ ಪ್ರೇರಣೆ ಎಂದು ಮನಸ್ಸಿನ ಮಾತನ್ನು ತೆರೆದಿಟ್ಟರು.
ಸತತ ನಾಲ್ಕನೇ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಎರಡು ಲಕ್ಷಗಳ ಅಧಿಕ ಮತಗಳ ಅಂತರದಿಂದ ಚುನಾಯಿತನಾಗಲು ಪಕ್ಷದ ಎಲ್ಲಾ ಕಾರ್ಯಕರ್ತರ ತಳ ಹಂತದ ಪರಿಶ್ರಮ ಬೆಲೆ ಕಟ್ಟಲಾಗದು. ನನ್ನ ಮೇಲೆ ನೀವು ಇಟ್ಟಿರುವ ಅಚಲ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದಲ್ಲಿ ಮತ್ತಷ್ಟು ಹುಮ್ಮಸ್ಸಿನಿಂದ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುವ ಮೂಲಕ ಕಾರ್ಯನಿರ್ವಹಿಸುತ್ತೇನೆ ಜೊತೆಗೆ ನಿಮ್ಮ ಆಶೋತ್ತರಗಳನ್ನು ನೆರೆವೇರಿಸುವ ಸಂಕಲ್ಪ ತೊಡುತ್ತೇನೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನುಷ್ಠಾನಕ್ಕೆ ತಂದಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಂತ್ಯೋದ್ಯಯ ಪರಿಕಲ್ಪನೆಯಡಿ ಜನರ ಜೀವನ ಮಟ್ಟ ಸುಧಾರಿಸಲು ಜಾರಿಗೆ ತಂದ ನೂರಾರು ಐತಿಹಾಸಿಕ ಜನಪರ ಯೋಜನೆಗಳ ಮೇಲೆ ನಂಬಿಕೆ ಇಟ್ಟು ಮತನೀಡಿದ ಕ್ಷೇತ್ರದ ಮತದಾರ ಬಾಂಧವರಿಗೆ ಈ ವೇದಿಕೆಯ ಮೂಲಕ ಕೃತಜ್ಞತೆ ಸಲ್ಲಿಸಲು ನಾನು ಆಭಾರಿಯಾಗಿದ್ದೇನೆ. ಭವಿಷ್ಯದಲ್ಲಿ ನನ್ನ ಲೋಕಸಭಾ ಕ್ಷೇತ್ರವನ್ನು ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿ ಪಥದ ಹಾದಿಯಲ್ಲಿ ತರುವ ಮೂಲಕ ಕಾರ್ಯಯೋಜನೆ ಕೈಗೊಳ್ಳುವ ಭರವಸೆ ನೀಡುತ್ತೇನೆ ಎಂದರು. ಶಾಸಕರಾದ ಗುರುರಾಜ್ ಗಂಟಿಹೊಳೆ, ಪ್ರಮುಖರಾದ ದೀಪಕ್ ಕುಮಾರ್ ಶೆಟ್ಟಿ, ವೆಂಕಟೇಶ್ ಕಿಣಿ, ಉದಯ ಕುಮಾರ್ ಶೆಟ್ಟಿ, ಬಾಬು, ಪ್ರಿಯದರ್ಶಿನಿ ಸದಾನಂದ ಶೆಟ್ಟಿ, ಮಹೇಂದ್ರ ಪೂಜಾರ್ ಅವರು ಸೇರಿದಂತೆ ಮಂಡಲದ ಪದಾಧಿಕಾರಿಗಳು, ವಿವಿಧ ಮೋರ್ಚಾದ ಮುಖಂಡರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು

   

Related Articles

error: Content is protected !!