ಹಾಸನ : ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಜೆಡಿಎಸ್ ಕಾರ್ಯಕರ್ತನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಹಿರಿಯ ಪುತ್ರ ವಿಧಾನಪರಿಷತ್ತಿನ ಜೆಡಿಎಸ್ ಸದಸ್ಯ ಡಾ.ಸೂರಜ್ ರೇವಣ್ಣ ಅವರನ್ನು ಹೊಳೆನರಸೀಪುರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣದ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿದ್ದು, ಸೋಮವಾರ ಸಿಐಡಿ ತಂಡ ಅಧಿಕೃತವಾಗಿ ತನಿಖೆ ಶುರು ಮಾಡಲಿದೆ
ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಪ್ರಕ ರಣ ಸಂಬಂಧ ಹಾಸನದಲ್ಲಿ ಶನಿವಾರ ಸೂರಜ್ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ತಡರಾತ್ರಿ ಅವರನ್ನು ಬಂಧನಕ್ಕೊಳಪಡಿಸಿದರು. ಬೆಂಗಳೂರಿಗೆ ಭಾನುವಾರ ಸೂರಜ್ ಅವರನ್ನು ಕರೆತಂದ ಹಾಸನ ಪೊಲೀಸರು, ಬೌರಿಂಗ್ ಆಸ್ಪತ್ರೆ ಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ ನಂತರ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆಯಲ್ಲಿ ಜಡ್ಜ್ ಮುಂದೆ ಹಾಜರುಪಡಿಸಿದರು. ಆಗ ನ್ಯಾಯಾಧೀಶರು ಸೂರಜ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿದರು.