ಬೆಂಗಳೂರು : ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ ಆವರಣದಲ್ಲಿ ಈಗಾಗಲೇ ಸಂತರು, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ದೇಶ ಹಾಗೂ ನಾಡಿಗೆ ಸೇವೆ ಸಲ್ಲಿಸಿದ ಹದಿಮೂರು ಮಹನೀಯರ ಪ್ರತಿಮೆಗಳಿದ್ದು ಹೊಸದಾಗಿ ನಾಡದೇವತೆ ಭುವನೇಶ್ವರಿ ಪ್ರತಿಮೆ ಸೇರ್ಪಡೆಯೊಂದಿಗೆ 14 ಪ್ರತಿಮೆ ಸ್ಥಾಪನೆಯಾದಂತಾಗಲಿದೆ.
ವಿಶೇಷವೆಂದರೆ, ಭುವನೇಶ್ವರಿಯ ಪ್ರತಿಮೆಯು ವಿಧಾನಸೌಧ ಆವರಣದಲ್ಲಿ ಸ್ಥಾಪನೆಯಾಗುತ್ತಿರುವ ದೇವತೆಯ ಮೊದಲ ಪ್ರತಿಮೆ ಎನಿಸಿಕೊಳ್ಳಲಿದೆ. ಕನ್ನಡ ನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡಿದ ಸುವರ್ಣ ಮಹೋತ್ಸವ ಅಂಗವಾಗಿ, ಕನ್ನಡ ನಾಡಿನ ಶ್ರೀಮಂತ ನುಡಿ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಸಾರಲು, ವಿಧಾನಸೌಧ ಪಶ್ಚಿಮ ದ್ವಾರದ ಬಳಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಲಾಗುತ್ತಿದೆ.
ಜೂನ್ 20ರಂದು 25 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿ ಪೂಜೆ ನೆರವೇರಿಸಿದ್ದು, ನವೆಂಬರ್1ರಂದು ಈ ಪ್ರತಿಮೆ ಲೋಕಾರ್ಪಣೆಗೊಳಿಸುವ ಗುರಿ ಹೊಂದಲಾಗಿದೆ.