ಉಡುಪಿ : ಭಾರತೀಯ ಜನಸಂಘದ ಸಂಸ್ಥಾಪಕ ಡಾ! ಶಾಮ ಪ್ರಸಾದ್ ಮುಖರ್ಜಿ ಅವರ ಜೀವನಾದರ್ಶ ಪಕ್ಷದ ಕಾರ್ಯಕರ್ತರಿಗೆ ದಾರಿದೀಪ ಎಂದು ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು. ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಭಾರತೀಯ ಜನಸಂಘದ ಸಂಸ್ಥಾಪಕ ಡಾ! ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪುಣ್ಯ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
ಬಿಜೆಪಿ ದೇಶದಲ್ಲೇ ವಿಭಿನ್ನವಾದ ಪಕ್ಷ. ಇತಿಹಾಸವನ್ನು ಅವಲೋಕಿಸಿದಾಗ ಬಿಜೆಪಿ ಎಷ್ಟೊಂದು ಶ್ರೇಷ್ಠ ರಾಜಕೀಯ ಪಕ್ಷ ಎಂಬುದು ತಿಳಿಯುತ್ತದೆ. ಇಂತಹ ಶ್ರೇಷ್ಠ ಪಕ್ಷದ ಕಾರ್ಯಕರ್ತರೆನಿಸುವುದು ಹೆಮ್ಮೆಯ ವಿಚಾರವಾಗಿದೆ. ನಮ್ಮ ಮನೆಯಲ್ಲಿ ಹಿರಿಯರ ನೆನಪಲ್ಲಿ ಅವರ ಸ್ಮರಣೆಯ ದಿನವನ್ನು ಆಚರಿಸಿದಂತೆಯೇ ಪಕ್ಷಕ್ಕಾಗಿ ಶ್ರಮಿಸಿ, ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹಿರಿಯ ಚೇತನಗಳನ್ನು ನೆನಪಿಸಿಕೊಂಡು ಅವರ ಮಾರ್ಗವನ್ನು ಅನುಸರಿಸುವ ದೃಷ್ಟಿಯಿಂದ ಡಾ! ಶ್ಯಾಮ ಪ್ರಸಾದ್ ಮುಖರ್ಜಿ ಅವರಂತಹ ಮಹಾನ್ ಚೇತನಗಳ ಪುಣ್ಯ ಸಂಸ್ಮರಣೆಯನ್ನು ಆಚರಿಸಲಾಗುತ್ತಿದೆ
ಸ್ವತಂತ್ರ ಭಾರತದ ಪ್ರಥಮ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಿಗಳಾಗಿದ್ದ ಡಾ! ಶಾಮ ಪ್ರಸಾದ್ ಮುಖರ್ಜಿ ಅವರು ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ತುಷ್ಟೀಕರಣ ನೀತಿಯನ್ನು ವಿರೋಧಿಸಿ, ನೆಹರೂ ಸಂಪುಟದಿಂದ ನಿರ್ಗಮಿಸಿ ಭಾರತೀಯ ಜನಸಂಘದ ಸ್ಥಾಪನೆಗೆ ಕಾರಣೀಭೂತರಾದರು.
‘ಏಕ್ ದೇಶ್ ಮೆ ದೋ ವಿಧಾನ್, ದೋ ನಿಶಾನ್, ದೋ ಪ್ರಧಾನ್ ನಹೀ ಚಲೆಂಗೆ’ ಎಂಬ ಉದಾತ್ತ ಚಿಂತನೆಯೊಂದಿಗೆ ಕಾಶ್ಮೀರದ ವಿಮೋಚನೆಗೆ ಹೋರಾಡಿ ಹುತಾತ್ಮರಾದ ಮುಖರ್ಜಿ ಅವರ ದೇಶ ಪ್ರೇಮ, ತ್ಯಾಗ, ಬಲಿದಾನ ಸದಾ ಸ್ಮರಣೀಯ ಎಂದು ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.
ಬಿಜೆಪಿ ರಾಜ್ಯ ಪ್ರಕಾಶನ ಪ್ರಕೋಷ್ಠದ ಸಹ ಸಂಚಾಲಕ ಅಜಿತ್ ಶೆಟ್ಟಿ ಹೆರಂಜೆ ಅವರು ಡಾ! ಶಾಮ ಪ್ರಸಾದ್ ಮುಖರ್ಜಿ ಅವರ ಸಾಧನೆ, ಹೋರಾಟಗಳು ಮತ್ತು ಜೀವನಾದರ್ಶಗಳ ಕುರಿತು ಉಪನ್ಯಾಸವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಉದಯ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸುರೇಶ್ ಶೆಟ್ಟಿ ಕಾಡೂರು, ಶ್ರೀಕಾಂತ್ ನಾಯಕ್, ಅನಿತಾ ಶ್ರೀಧರ್, ರಾಘವೇಂದ್ರ ಕುಂದರ್, ಸದಾನಂದ ಬಳ್ಕೂರು, ಸತ್ಯಾನಂದ ನಾಯಕ್, ಶ್ರೀನಿಧಿ ಹೆಗ್ಡೆ, ಗಿರೀಶ್ ಎಮ್.ಅಂಚನ್, ಸುಮಿತ್ರ ಆರ್. ನಾಯಕ್, ಸಂಧ್ಯಾ ರಮೇಶ್, ಕಮಲಾಕ್ಷ ಹೆಬ್ಬಾರ್, ಶಶಾಂಕ್ ಶಿವತ್ತಾಯ, ರುಡಾಲ್ಪ್ ಡಿಸೋಜ, ಶ್ರೀಕಾಂತ್ ಕಾಮತ್, ದಿನೇಶ್ ಅಮೀನ್, ಜಿತೇಂದ್ರ ಶೆಟ್ಟಿ, ಜಗದೀಶ್ ಆಚಾರ್ಯ, ಸುಜಾಲ ಸತೀಶ್, ಅಶ್ವಿನಿ ಶೆಟ್ಟಿ, ಸರೋಜಾ ಶೆಣೈ ಸಹಿತ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.