- ಆತ್ಮಶೋಧನೆ ಅಗತ್ಯ
ಶಿಸ್ತುಬದ್ಧವಾದ ಜೀವನ ಕ್ರಮ ಮತ್ತು ಸರಳ ಆಹಾರ ಪದ್ಧತಿಯಿಂದ ಉನ್ನತ ಹಾಗೂ ಉದಾತ್ತ ವ್ಯಕ್ತಿತ್ವ ರೂಪುಗೊಳ್ಳುವುದು ಸಾಧ್ಯವೇನೋ ನಿಜ. ಆದರೆ ಆಧ್ಯಾತ್ಮಿಕ ಶ್ರೇಯಸ್ಸನ್ನು ಸಾಧಿಸಲು ಅವಷ್ಟೇ ಸಾಲದು ಎನ್ನುವುದು ಮಹಾತ್ಮಾ ಗಾಂಧೀಜಿಯವರ ಖಚಿತ ಅಭಿಪ್ರಾಯವಾಗಿತ್ತು. ತೀವ್ರವಾದ ಆತ್ಮಶೋಧನೆ, ಪರಮಾತ್ಮನಲ್ಲಿ ಸಂಪೂರ್ಣ ಶರಣಾಗತಿ ಮತ್ತು ಭಗವತ್ಕ್ರಪೆ–ಇವಿಷ್ಟು ಆಧ್ಯಾತ್ಮಿಕ ಶ್ರೇಯಸ್ಸಿಗೆ ಅತ್ಯಗತ್ಯ ಎನ್ನುವುದನ್ನು ಮಹಾತ್ಮಾ ಗಾಂಧೀಜಿಯವರು ತಮ್ಮ ‘ಸತ್ಯಾನ್ವೇಷಣೆ’ಯ ಪ್ರಯೋಗಗಳಲ್ಲಿ ಕಂಡು ಕೊಂಡಿದ್ದರು. ತಮ್ಮ ಬ್ರಹ್ಮಚರ್ಯದ ಪ್ರಯೋಗದಲ್ಲಿ ಗಾಂಧೀಜಿಯವರು ಕಂಡುಕೊಂಡ ಸತ್ಯ ಇದು. ಅವರ ದೃಷ್ಟಿಯಲ್ಲಿ ಬ್ರಹ್ಮಚರ್ಯವೆಂದರೆ ಲೈಂಗಿಕ ನಿಷ್ಕಾಮನೆ ಮಾತ್ರವಲ್ಲ, ಬದುಕಿನ ಸಮಸ್ತ ಕರ್ಮಾದಿಗಳಲ್ಲಿ ನಿಷ್ಕಾಮವನ್ನು ಸಾಧಿಸುವುದೇ ಆಗಿತ್ತು. ಗಾಂಧೀಜಿಯವರು ಹೇಳುತ್ತಾರೆ. ಮಲಿನವಾದ ಮನಸ್ಸು ಉಪವಾಸದಿಂದ ಪರಿಶುದ್ಧವಾಗುವುದಿಲ್ಲ. ಮನಸ್ಸನ್ನು ಭಾವಿಕಾರದಿಂದ ವಿಮುಕ್ತಗೊಳಿಸಲು ತೀವ್ರವಾದ ಆತ್ಮಶೋಧನೆ, ಭಗವಂತನಲ್ಲಿ ಸಂಪೂರ್ಣ ಶರಣಾಗತಿ ಅಗತ್ಯ. ಇದರಿಂದಲೇ ಭಗವತ್ಕøಪೆ ಪ್ರಾಪ್ತವಾಗುತ್ತದೆ. ದೇಹಕ್ಕೂ ಮನಸ್ಸಿಗೂ ನಿಕಟ ಸಂಬಂಧವಿದೆ. ವಿಕಾರವಾದ ಮನಸ್ಸು ಸದಾ ಸ್ವಾದಿಷ್ಟ ಆಹಾರಗಳನ್ನೂ ಭೋಗಗಳನ್ನೂ ಹಂಬಲಿಸುತ್ತದೆ. ಭಾವ ವಿಕಾರವನ್ನು ನಿವಾರಿಸಲು ದೇಹಕ್ಕೆ ಶುದ್ಧವಾದ ಉದ್ರೇಕ ರಹಿತವಾದ ಆಹಾರವೂ ಕಾಲಕಾಲಕ್ಕೆ ಉಪವಾಸವೂ ಅಗತ್ಯ.