ಕೋಟ: ಯಕ್ಷಗಾನದ ಸರ್ವಾಂಗವನ್ನು ಬಲ್ಲ ಅನೇಕರ ಪರಂಪರೆಯ ಕೊಂಡಿ ಬಡಗು ತಿಟ್ಟಿನ ಹಿರಿಯ ಭಾಗವತ ಸಾಧಕ ಶ್ರೇಷ್ಠರು ಹೆರೆಂಜಾಲು ಗೋಪಾಲ ಗಾಣಿಗರು. ಯಕ್ಷರಂಗದಲ್ಲಿ ಹಂತ ಹಂತವಾಗಿ ಮೇಲೆ ಬಂದ ಗಾಣಿಗರು ಭಾಗವತಿಗೆ ಕಲಿತು ಮೇಳ ಸೇರಿಕೊಂಡವರು. ಮರವಂತೆಯ ಭೋರ್ಗೆರೆಯುವ ಕಡಲಿನ ಭಾಗವತರಾದ ನರಸಿಂಹ ದಾಸರ ಒಡನಾಟಿಕೆಯನ್ನು ಹೊಂದಿ ಸಾರ್ಥಕ್ಯವನ್ನು ಕಂಡುಕೊಂಡರು. ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಪ್ರಸಂಗಗಳ ಮೂರು ಘಟಕದಲ್ಲಿಯೂ ತನ್ನ ಛಾಪನ್ನು ಮೂಡಿಸಿದ ಹೆಗ್ಗಳಿಕೆ ಹೆರೆಂಜಾಲರದ್ದು. ‘ನಾಚುತ ನುಡಿದನು ಆ ಕ್ಷಣಪೂರ್ವನು | ಓ ಚೆಲುವೆ ನೀನ್ಯಾರೆನುತಾ’ ಎನ್ನುವ ಪದ್ಯ ಹೆರೆಂಜಾಲರ ಕಂಠದಲ್ಲಿ ಸುಶ್ರಾವ್ಯವಾಗಿ ಬರುತ್ತಿದ್ದಾಗ ಹಿರಿಯ ಪ್ರಸಂಗಕರ್ತ ಡಾ| ವೈ ಚಂದ್ರಶೇಖರ ಶೆಟ್ಟಿಯವರು ಯಾವಾಗಲೂ ಮನದುಂಬಿ ಪ್ರಶಂಸಿಸುತ್ತಿದ್ದರು. ಕವಿಗೆ ಹಾಡುಗಾರಿಕೆಯಿಂದ ಸಂತೃಪ್ತಿಯನ್ನು ತಂದೊದಗಿಸಿದ ಕಲಾವಿದ ಹೆರೆಂಜಾಲರು. ಮುಮ್ಮೇಳ ಕಲಾವಿದರೂ, ಹಿಮ್ಮೇಳ ಕಲಾವಿದರೂ ಗೋಪಾಲ ಗಾಣಿಗರೊಂದಿಗಿನ ರಂಗ ಸುಖವನ್ನು ಮತ್ತೆ ಮತ್ತೆ ನೆನಪಿಸಿ ಅನುಭವಿಸುವ ಪ್ರಶಂಸನಾ ನುಡಿಗೆ ಪಾತ್ರರಾದವರು ಹೆರೆಂಜಾಲರು ಎಂದು ಖ್ಯಾತ ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅಭಿನಂದನಾ ನುಡಿಗಳನ್ನಾಡಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಜೂ. 23ರಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಯಶಸ್ವೀ ಕಲಾವೃಂದದ ಸಹಕಾರದೊಂದಿಗೆ ಯಕ್ಷಾಂತರಂಗ-ವ್ಯವಸಾಯೀ ಯಕ್ಷ ತಂಡದ ಯಕ್ಷ ದುಂದುಭಿ-2024ರಲ್ಲಿ ‘ಕಾರಂತ ಯಕ್ಷಾಂತರಗ ಪ್ರಶಸ್ತಿ ಪ್ರಧಾನ’ ಸಮಾರಂಭದಲ್ಲಿ ಹೆರೆಂಜಾಲು ಗೋಪಾಲ ಗಾಣಿಗರಿಗೆ ಪ್ರಶಸ್ತಿ ನೀಡಿ ಗೌರವಿಸಿ ಪ್ರಸಾದ್ ಕುಮಾರ್ ಅಭಿನಂದನಾ ನುಡಿಗಳನ್ನಾಡಿದರು.
ಹಿರಿಯರಾಗಿ, ಸಾಕಷ್ಟು ಅನುಭವವುಳ್ಳ ಕೃಷ್ಣಮೂರ್ತಿ ಉರಾಳರ ಸಂಘಟನೆಯ ಯಕ್ಷಾಂತರಂಗ, ಅನುಭವೀ ಕಲಾವಿದರ ತಂಡವನ್ನು ಕಟ್ಟಿಕೊಂಡು ಸಾಂಪ್ರದಾಯಿಕ ಯಕ್ಷ ನಡೆಯನ್ನೇ ಸಾರ್ವತ್ರಿಕವಾಗಿ ಮತ್ತೆ ಮತ್ತೆ ನೆನಪಿಸುತ್ತಾ ಸಮಾಜದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಮತ್ತೆ ಮತ್ತೆ ಪ್ರಜ್ವಲಿಸುತ್ತಾ ಸಾಂಸ್ಕøತಿಕವಾಗಿ ಬೆಳಗುತ್ತ ಇನ್ನಷ್ಟು ಕಾಲ ಕಾಂತಿಯನ್ನು ನೀಡಲಿ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನ್ನಾಡಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷÀ ತಲ್ಲೂರು ಶಿವರಾಮ ಶೆಟ್ಟಿಯವರನ್ನು ಗೌರವಿಸಿ ಅಭಿನಂದಿಸಲಾಯಿತು. ವಿಜಯಾ ಬ್ಯಾಂಕಿನ ನಿವೃತ್ತ ಪ್ರಭಂದಕರಾದ ಭುವನಪ್ರಸಾದ್ ಹೆಗ್ಡೆ, ಪ್ರೊ| ಸಿ. ಉಪೇಂದ್ರ ಸೋಮಯಾಜಿ, ಸಂಸ್ಕøತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ಸ್ಥಾಪಕ ವಿಶ್ವನಾಥ ಶಣೈ ಉಡುಪಿ, ಮಣೂರು ಸುಬ್ರಾಯ ಆಚಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೃಷ್ಣಮೂರ್ತಿ ಉರಾಳರು ಸ್ವಾಗತಿಸಿದರು. ಕೃಷ್ಣಮೂರ್ತಿ ಬ್ರಹ್ಮಾವರ ಕೃತಜ್ಞತಾ ನುಡಿಗಳನ್ನಾಡಿದರು. ಬಳಿಕ ಯಕ್ಷಾಂತರಂಗದ ಕಲಾವಿದರಿಂದ ಯಕ್ಷಗಾನ ಪ್ರಸಂಗ ‘ಶರಸೇತುಬಂಧ ಮತ್ತು ಸುಭದ್ರಾ ಕಲ್ಯಾಣ’ ರಂಗದಲ್ಲಿ ಪ್ರದರ್ಶನಗೊಂಡಿತು.