ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಪ್ರವರ್ತಕ ಆನಂದ್ ಸಿ ಕುಂದರ್ ಮಾತನಾಡಿ ವಿದ್ಯಾರ್ಥಿಗಳು ತಾವು ಕಲಿತ ಜ್ಞಾನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ, ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಹಾಗೂ ಪರಿಸರವನ್ನು ಪ್ರೀತಿಸಿ, ಹಸಿರೇ ಉಸಿರು ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಧಾನ ಉಪನ್ಯಾಸವನ್ನು ನೀಡಿದ ಲೇಖಕಿ ಡಾ. ಪಾರ್ವತಿ ಐತಾಳ್, ಇವರು ಪಠ್ಯ ಪುಸ್ತಕದಲ್ಲಿ ಪಡೆದ ಜ್ಞಾನದ ಕುರಿತು ಚಿಂತನೆ ಮಾಡುವುದು ಶಿಕ್ಷಣದ ಪ್ರಮುಖ ಉದ್ದೇಶವಾಗಿರಬೇಕು. ಅಂಕಗಳಿಗೆ ಮಹತ್ವ ಕೊಡುತ್ತಿರುವ ಈ ಸಮಾಜದಲ್ಲಿ ಜ್ಞಾನ, ಮೌಲ್ಯಗಳಿಗೆ ಪ್ರಾಮುಖ್ಯತೆ ಕೊಡುವ ಶಿಕ್ಷಣದ ಅವಶ್ಯಕತೆಯಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಸುನೀತ ವಿ ಕಾಲೇಜಿನ ವಾರ್ಷಿಕ ವರದಿಯನ್ನು 2023-24ರಲ್ಲಾದ ಶೈಕ್ಷಣಿಕ ಪ್ರಗತಿ ಮತ್ತು ಪಠ್ಯ-ಪಠ್ಯೇತರ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 2022-23ರಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 44 ವಿದ್ಯಾರ್ಥಿಗಳಿಗೆ ಮತ್ತು ಪ್ರಸ್ತುತ ತರಗತಿಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಹಾಗೂ ವಿಷಯವಾರು 100ರಲ್ಲಿ 100 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಗೀತಾನಂದ ಫೌಂಡೇಶನ್ ವತಿಯಿಂದ ನಗದು ಬಹುಮಾನವನ್ನು ನೀಡಲಾಯಿತು. ಹಾಗೂ ಸಾಂಸ್ಕ್ರತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಕು. ಫಾತಿಮಾ, ಕು. ಸಿಂಚನಾ, ಕು. ದೀಕ್ಷಿತಾ, ಕು. ಮೇಘನಾ ಮತ್ತು ಕು. ಸುದೀಪ್, ಕಾಲೇಜಿನ ಬೋಧಕ-ಬೋಧಕೇತರರು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶಂಕರ ನಾಯ್ಕ ಬಿ ಸ್ವಾಗತಿಸಿ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ. ಮನೋಜ ಕುಮಾರ್.ಎಂ ವಂದಿಸಿದರು. ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಾಜಣ್ಣ .ಎಂ ನಿರೂಪಿಸಿದರು.