ಹಿರಿಯಡ್ಕ : ಉಡುಪಿಯಲ್ಲಿ ಇತ್ತೀಚೆಗೆ ನಡೆದಿದ್ದ ಗ್ಯಾಂಗ್ ವಾರ್ ಪ್ರಕರಣದ ಆರೋಪಿಗಳಿಬ್ಬರು ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ದಾಂಧಲೆ ನಡೆಸಿ, ಜಿಲ್ಲಾ ಅಧೀಕ್ಷಕರು ಮತ್ತು ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಸಂಭವಿಸಿದೆ.
ಕಾರಾಗೃಹದಲ್ಲಿರುವ ವಿಚಾರಣಾ ಕೈದಿಗಳಾದ ಮುಹಮ್ಮದ್ ಆಶಿಕ್ ಮತ್ತು ಮಹಮ್ಮದ್ ಸಕ್ಲೀನ್ ಪ್ರಿಜನ್ ಕಾಲ್ ಸಿಸ್ಟಮ್ ಕರೆ ಮಾಡಲು ತಡವಾಯಿತೆಂದು ಹೇಳಿ ಕರ್ತವ್ಯದಲ್ಲಿದ್ದ ಜೈಲರ್ ಎಸ್.ಎ.ಶಿರೋಳ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಜೋರಾಗಿ ಕೂಗಾಡಿದ್ದಾರೆ. ಅಲ್ಲದೆ ಅಧೀಕ್ಷಕರ ಕಚೇರಿಯಿಂದ ಕರೆದುಕೊಂಡು ಹೋಗುವಾಗ ಸಿಬ್ಬಂದಿಯೊಂದಿಗೆ ಮತ್ತೆ ಗಲಾಟೆ ಆರಂಭಿಸಿ ಸಿಬ್ಬಂದಿಯನ್ನು ತಳ್ಳಿ ಕೊಠಡಿಯಲ್ಲಿದ್ದ ಬೆಂಕಿ ನಂದಿಸುವ ಯಂತ್ರವನ್ನು ತೆಗೆಯಲು ಪ್ರಯತ್ನಿಸಿದ್ದಾರೆ.
ಬಳಿಕ ಅಡುಗೆ ಕೋಣೆಯಲ್ಲಿರುವ ದೊಡ್ಡ ಸೌಜನ್ನು ಮತ್ತು ಚಹಾ ಮಾಡುವ ಸೌಟನ್ನು ತಂದು, ಮುಹಮ್ಮದ್ ಪಕ್ಲೀನ್ ತನ್ನ ಕೊಠಡಿಯ ಮರದ ಕುರ್ಚಿಯನ್ನು ತೆಗೆದುಕೊಂಡು ಸಿಬ್ಬಂದಿಗೆ ಹಲ್ಲೆ ಮಾಡಲು ಪ್ರಯತ್ನಿಸಿದ್ದನೆಂದು ದೂರಲಾಗಿದೆ. ಈ ವೇಳೆ ಅವರನ್ನು ಸಿಬ್ಬಂದಿ ಸೆರೆಹಿಡಿದರು, ಅಲ್ಲದೆ ಕರ್ತವ್ಯದಲ್ಲಿದ್ದ ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ದರಾಮ ಬಿ.ಪಾಟೀಲ್ ಹಾಗೂ ಸಿಬ್ಬಂದಿಗೆ ಹಲ್ಲೆ ಮಾಡಲು ಪ್ರಯತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ. ಅದರಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ