ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯ ಮೂಲಕ ಸರ್ವಾಧಿಕಾರ ಹೇರಿಕೆ ಮಾಡಿದ್ದರು. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೇಲಿನ ದಾಳಿಯಾಗಿತ್ತು ಎಂದು ಲೋಕಸಭೆಯ ನೂತನ ಸ್ಪೀಕರ್ ಓಂ ಬಿರ್ಲಾ ಕಟು ನುಡಿಗಳಲ್ಲಿ ಟೀಕಿಸಿದ್ದಾರೆ.
ಬುಧವಾರ ನೂತನ ಸ್ಪೀಕರ್ ಆಗಿ ಆಯ್ಕೆಯಾದ ಬೆನ್ನಲ್ಲೇ 1975ರ ಜೂ.25ರಂದು ಅಂದಿನ ಪ್ರಧಾನಿ ಇಂದಿರಾ ಅವರು ದೇಶದಲ್ಲಿ ಜಾರಿಗೊಳಿ ಸಿದ್ದ ತುರ್ತು ಪರಿಸ್ಥಿತಿಯನ್ನು ಖಂಡಿಸುವ ನಿರ್ಣ ಯ ಮಂಡಿಸಿ ಮಾತನಾಡಿದ ಬಿರ್ಲಾ, ‘1975ರ ಜೂ.25ನ್ನು ಭಾರತ ಇತಿಹಾಸದ ಕರಾಳ ಭಾಗ ವೆಂದು ನೆನಪಿಸಿಕೊಳ್ಳಲಾಗುತ್ತದೆ. ಭಾರತ ಪ್ರಜಾಪ್ರಭುತ್ವದ ತಾಯ್ಕಾಡು ಎಂದು ವಿಶ್ವದೆಲ್ಲೆಡೆ ಹಿರಿಮೆ ಹೊಂದಿದೆ. ಆದರೆ ಇಂಥ ಭಾರತದ ಮೇಲೆ ಇಂದಿರಾ ಸರ್ವಾಧಿಕಾರ ಹೇರಿದರು. ಈ ವೇಳೆ ಭಾರತೀಯ ನಾಗರಿಕರ ಹಕ್ಕುಗಳನ್ನು ದಮನ ಮಾಡಲಾಯಿತು ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲಾಯಿತು. ವಿಪಕ್ಷ ನಾಯಕರನ್ನು ಜೈಲಿಗೆ ಹಾಕಲಾಯಿತು. ಇಡೀ ದೇಶವನ್ನೇ ಜೈಲಾಗಿ ಪರಿವರ್ತಿಸಲಾಯಿತು. ಪತ್ರಿಕೆಮತ್ತು ನ್ಯಾಯಾಂಗ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕಲಾಯಿತು’ ಎಂದರು.