ನವದೆಹಲಿ: ಈವರೆಗೆ ಬಿಸಿಗಾಳಿ ಹಾಗೂ ಬಿರುಬೇಸಿಗೆಯಿಂದ ತತ್ತರಿಸಿದ್ದ ದಿಲ್ಲಿಗೆ ಶುಕ್ರವಾರ ಮುಂಗಾರು ಪ್ರವೇಶಿಸಿ ಮೊದಲ ದಿನವೇ 88 ವರ್ಷದಲ್ಲಿ ಕಂಡು ಕೇಳರಿಯದ ಮಳೆ ಸುರಿದಿದೆ ಒಂದೇ ದಿನ 23 ಸೆಂ.ಮೀ. ಮಳೆ ಸುರಿದಿದ್ದು, ರಾಜಧಾನಿ ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಭಾರೀ ಗಾಳಿ ಸಹಿತ ಮಳೆಗೆ ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ವಾಹನ, ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ. ಹಲವು ತಗ್ಗು ಪ್ರದೇಶಗಳು, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ ಕಾರಣ ಜನಜೀವನವೂ ಅಸ್ತವ್ಯಸ್ತವಾಗಿದೆ
ವಿಶೇಷವೆಂದರೆ ಕಳೆದ ತಿಂಗಳ ಅಂತ್ಯದಿಂದ ಜೂ.22ರವರೆಗೆ ದೆಹಲಿಯಲ್ಲಿ ಸತತ 40 ದಿನ 40 ಡಿ.ಸೆಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿತ್ತು. ಜೊತೆಗೆ 2 ದಿನ ಉಷ್ಣಾಂಶ 50 ಡಿ.ಸೆ ಗಡಿಯನ್ನೂ ದಾಟಿತ್ತು. ಗುರುವಾರ ಕೂಡಾ ಭಾರೀ ಉಷ್ಣಹವೆ ಇದ್ದ ದೆಹಲಿಯಲ್ಲಿ ಶುಕ್ರವಾರ ಬೆಳಗಿನ ಜಾವ 3.00 ಗಂಟೆಯ ವೇಳೆಗೆ ಭಾರೀ ಮಳೆ ಸುರಿದಿದೆ
ಗಾಳಿ, ಮಳೆಗೆ ದೆಹಲಿ ವಿಮಾನ ನಿಲ್ದಾಣದ ಟರ್ಮಿ ನಲ್ 1ರ ಮೇಲ್ಬಾವಣಿ ಕುಸಿದು ಕಾರು ಚಾಲಕ ಅಸುನೀಗಿ ಸುಮಾರು 10 ಜನ ಗಾಯಗೊಂಡಿದ್ದಾರೆ. ಇನ್ನೊಂದೆಡೆ ನಿರ್ಮಾಣ ಹಂತದ ಗೋಡೆ ಕುಸಿದು ಮೂವರು ಮಣ್ಣಿನಡಿ ಸಿಕ್ಕಿಬಿದ್ದಿದ್ದಾರೆ. ಅವರು ಬದುಕಿರುವ ಸಾಧ್ಯತೆ ಕ್ಷೀಣವಾಗಿದೆ ಎನ್ನಲಾಗಿದೆ.