ವಿಜಯಪುರ : ವಿಜಯಪುರ ಜಿಲ್ಲೆಯ ಕೊಲಾರ ತಾಲೋಕಿನ ಕೃಷ್ಣಾ ನದಿ ತೀರದಲ್ಲಿ ಇಸ್ಪೀಟ್ ಆಡುತ್ತಿದ್ದಾಗ ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲು ತೆಪ್ಪವೇರಿ ನದಿ ದಾಟುತ್ತಿದ್ದಾಗ ತೆಪ್ಪ ಮಗುಚಿ ಒಬ್ಬ ಮೃತಪಟ್ಟು, ಐವರು ಕಣ್ಮರೆಯಾದ ಘಟನೆ ನಡೆದಿದೆ
ಒಟ್ಟು ಎಂಟು ಮಂದಿ ತೆಪ್ಪದಲ್ಲಿದ್ದು, ಕೊಲ್ದಾರದ ಪುಂಡಲೀಕ ಮಲ್ಲಪ್ಪ ಯಂಕಂಚಿ (36) ಮೃತಪಟ್ಟಿದ್ದಾರೆ. ಇಬ್ಬರು ಈಜಿ ದಡ ಸೇರಿದ್ದು ಐವರು ನಾಪತ್ತೆಯಾಗಿದ್ದಾರೆ ಅವರಿಗಾಗಿ ಹುಡುಕಾಟ ಮುಂದುವರಿದಿದೆ.
ಕೊಲ್ದಾರ ಪಟ್ಟಣ ನಿವಾಸಿಗಳಾದ ಮಹಿಬೂಬ್ ವಾಲಿಕಾರ (30), ತಯ್ಯಬ್ ಚೌಧರಿ (42), ರಫೀಕ್ ಜಾಲಗಾರ ಅಲಿಯಾಸ್ ಬಾಂದೆ (55), ದಶರಥ ಗೌಡರ ಸೂಳಿಬಾವಿ (66) ನಾಪತ್ತೆಯಾದವರು ಎಂದು ಹೇಳಲಾಗುತ್ತಿದೆ.
ಬಲೆ ಹಾಕಿ ಅಗ್ನಿಶಾಮಕದಳ ಹಾಗೂ ಪೊಲೀಸರು ಸ್ಥಳೀಯ ಮೀನುಗಾರರ ಸಹಾಯದಿಂದ ಹುಡುಕಾಟ ನಡೆಸುತ್ತಿದ್ದಾರೆ. ಸುಮಾರು ಎಂಟು ಜನರ ಗುಂಪು ನದಿ ತೀರದಲ್ಲಿ ಜೂಜು ಆಡುತ್ತಿರುವ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೊಲ್ದಾರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.ಈ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಅಲ್ಲೇ ಇದ್ದ ತೆಪ್ಪ ಏರಿದ್ದು ನದಿಯಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಸುಳಿಗೆ ಸಿಲುಕಿ ತೆಪ್ಪ ನೀರಿನಲ್ಲಿ ಮಗುಚಿದೆ. ಈ ವೇಳೆ ಇಬ್ಬರು ಈಜಿ ದಡ ಸೇರಿದರೆ, ಉಳಿದ ಆರು ಮಂದಿ ನೀರು ಪಾಲಾಗಿದ್ದಾರೆ. ಇವರಲ್ಲಿ ಒಬ್ಬನ ಮೃತದೇಹ ಪತ್ತೆಯಾಗಿದೆ.