ಬೈಂದೂರು : ನಿರಂತರ ಮಳೆಯಿಂದಾಗಿ ಕ್ಷೇತ್ರದ ಕೆಲವು ಭಾಗದಲ್ಲಿ ನೆರೆ ಆವರಿಸಿದ್ದ ಹಿನ್ನೆಲೆಯಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆಯವರು ಬೆಂಗಳೂರಿನಲ್ಲಿ ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮಗಳನ್ನು ಹಠತ್ ರದ್ದುಗೊಳಿಸಿ ನೇರವಾಗಿ ಕ್ಷೇತ್ರಕ್ಕೆ ಆಗಮಿಸಿ, ಶುಕ್ರವಾರ ಬೆಳಗ್ಗೆಯಿಂದ ನೆರೆಪೀಡಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕರು ಸೇರಿದಂತೆ ನೆರೆಹಾನಿಗೆ ಒಳಗಾದವರೊಂದಿಗೆ ಮಾತುಕತೆ ನಡೆಸಿದರು.
ನಾವುಂದ ಭಾಗದ ಸಾಲ್ಬುಡ, ನಾಡಾ ಗ್ರಾಮದ ಚಿಕ್ಕಳ್ಳಿ, ಸಂಸಾಡಿ, ಹೆಮ್ಮುಂಜಿ, ಕೊಂಣ್ಕೀ ಪ್ರದೇಶಗಳಲ್ಲಿ ಮಳೆಯಿಂದಾಗಿ ನೆರೆ, ಪ್ರವಾಹ, ಗುಡ್ಡೆ ಕುಸಿತ ಉಂಟಾಗಿದ್ದು ಸ್ಥಳಕ್ಕೆ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಭೇಟಿ ನೀಡಿ ಜನರ ರಕ್ಷಣೆ, ಸ್ಥಳಾಂತರ ಮತ್ತು ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಅಗತ್ಯ ಸೂಚನೆ ನೀಡಿದರು.
ನೆರೆ ಪೀಡಿದ ಪ್ರದೇಶದ ಜನತೆಗೆ ತುರ್ತಾಗಿ ಆಗಬೇಕಿರುವ ಅಗತ್ಯ ಮೂಲಸೌಕರ್ಯದ ಜತೆಗೆ ಶಾಶ್ವತ ಪರಿಹಾರ ಕಾರ್ಯಗಳ ಬಗ್ಗೆಯೂ ಆದಷ್ಟು ಬೇಗ ಕ್ರಮ ವಹಿಸಬೇಕು. ಯಾರಿಗೂ ಕೂಡ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದೇ ವೇಳೆ ಸ್ಥಳೀಯರದಿಂದಲೂ ಶಾಸಕರು ಮಾಹಿತಿ ಪಡೆದುಕೊಂಡರು.
ಎಚ್ಚರಿಕೆ ವಹಿಸಲು ಮನವಿ
ಎಡೆಬಿಡದೆ ಸುರಿಯುತ್ತಿರುವ ಮಳೆಯು ಇನ್ನಷ್ಟು ಅಪಾಯ ತಂದೊಡ್ಡುವ ಭೀತಿ ಇದ್ದು, ಕ್ಷೇತ್ರದ ಜನರು ಸಂಭಾವ್ಯ ಅಪಾಯಗಳ ಬಗ್ಗೆ ಜಾಗರೂಕರಾಗಿರಬೇಕು. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕು. ವಿಶೇಷವಾಗಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾಾರ್ಥಿಗಳು ಎಚ್ಚರ ವಹಿಸಬೇಕು. ಸಮುದ್ರ, ನದಿ ಹಾಗೂ ಡ್ಯಾಮ್‌ಗಳಿಗೆ ಈಜುವುದು, ಇಳಿಯುವುದು ಇತ್ಯಾದಿ ಮಾಡಬಾರದು. ನದಿ, ಹೊಳೆ, ತೋಡು, ಹಳ್ಳ ದಾಟುವಾಗ ಎಚ್ಚರ ವಹಿಸಬೇಕು. ನೀರಿನ ಕರೆ, ಬಾವಿ ಸಹಿತ ಮೂಲಗಳಿಗೆ ಮಕ್ಕಳನ್ನು ಬಿಡಬಾರದು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಅವರು ಮನವಿ ಮಾಡಿದ್ದಾರೆ
ವಿಪತ್ತು ನಿರ್ವಹಣ ತಂಡದ ಜತೆ ಭೇಟಿ
ಗುಲ್ವಾಡಿ ಗ್ರಾಮ ಪಂಚಾಯತ್ ವ್ಯಾಾಪ್ತಿಯ ಸೌಕೂರು ಬಳಿ ಮನೆಗೆ ಮಳೆ ನೀರಿನಿಂದ ನೀರು ನುಗ್ಗಿದ್ದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದ ವಿಪತ್ತು ನಿರ್ವಹಣ ತಂಡದ ಸದಸ್ಯರು ಭೇಟಿ ಸ್ಥಳಕ್ಕೆ ಭೇಟಿ ನೀಡಿದರು. ಮಳೆಗಾಲದ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೇ ಶಾಸಕರ ನೇತೃತ್ವದಲ್ಲಿ ಎರಡು ತಂಡ ರಚನೆ ಮಾಡಲಾಗಿದ್ದು, ಆ ತಂಡವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ವಿಪತ್ತು ನಿರ್ವಹಣೆ ಸಂಬಂಧ ಎರಡು ತಂಡಗಳು ಸ್ಥಳೀಯರು ಹಾಗೂ ಸ್ಥಳೀಯ ಕಾರ್ಯಕರ್ತರ ಮನ್ವಯದೊಂದಿಗೆ ಕಾರ್ಯ ನಿರ್ವಹಣೆ ಮಾಡುತ್ತಿದೆ.