ಬೆಂಗಳೂರು : ಮೈಸೂರಿನ ಮುಡಾ ಹಗರಣದ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರ ತೀವ್ರ ಗೊಳ್ಳುತ್ತಿದೆ. ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಜಮೀನಿನ ಮೌಲ್ಯ ನೀಡಿ ಸೈಟ್ ಬಿಟ್ಟುಕೊಡುತ್ತೇನೆ ಎಂದರೆ, ಮತ್ತೊಂದೆಡೆ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ಸರ್ಕಾರವು ಕಡತ ತಿರುಚುವ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಶೋಕ ಅವರು, ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣವಾದ 4,000 ಕೋಟಿ ರೂ. ಮೌಲ್ಯದ ಮುಡಾ ಹಗರಣದಲ್ಲಿ ದಿನಕ್ಕೊಂದು ಕರ್ಮಕಾಂಡ ಬಯಲಾಗುತ್ತಿದೆ ಎಂದಿದ್ದಾರೆ
ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಮಂಜೂರಾಗಿರುವ 35 ಕೋಟಿ ರೂ. ಮೌಲ್ಯದ 14 ನಿವೇಶನಗಳಿಗೆ ಸಂಬಂಧಪಟ್ಟ ಕಡತಗಳನ್ನು ತಿರುಚುವ ಉದ್ದೇಶದಿಂದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಕಡತಗಳನ್ನು ಬೆಂಗಳೂರಿಗೆ ತಂದಿರುವ ಗುಮಾನಿ ಇದೆ. ಸರ್ಕಾರ ಈ ಕೂಡಲೇ ಸಂಬಂಧಪಟ್ಟ ಕಡತಗಳನ್ನ ಬಹಿರಂಗ ಮಾಡಿ ಸಾರ್ವಜನಿಕರ ಮುಂದಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.