ಬೆಂಗಳೂರು : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮೇಯರ್ ಮೋಹನ್ ರಾಜ್ ಮತ್ತು ಚಿತ್ರ ನಿರ್ದೇಶಕ ಮಿಲನ ಪ್ರಕಾಶ್ ಅವರನ್ನು ಶುಕ್ರವಾರ ವಿಚಾರಣೆ ನಡೆಸಿದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ನೋಟಿಸ್ ಹಿನ್ನೆಲೆಯಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ಕಚೇರಿಯಲ್ಲಿ ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ಎದುರು ಈ ಇಬ್ಬರೂ ವಿಚಾರಣೆಗೆ ಹಾಜರಾಗಿದ್ದರು. ಸುಮಾರು 3 ಗಂಟೆಗಳ ಕಾಲ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಪ್ರಕರಣ ಸಂಬಂಧ ಹಲವು ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಲಾಗಿದೆ
ಪ್ರಕರಣದ ತನಿಖೆ ವೇಳೆ ಪೊಲೀಸರು ಆರೋಪಿ ನಟ ದರ್ಶನ್ ಬಳಿ 40 ಲಕ್ಷ ರೂ. ನಗದು ಜಪ್ತಿ ಮಾಡಿದ್ದರು. ವಿಚಾರಣೆ ವೇಳೆ ಈ ಹಣವನ್ನು ಮಾಜಿ ಉಪಮೇಯರ್ ಮೋಹನ್ ರಾಜ್ ಬಳಿ ಪಡೆದಿದ್ದಾಗಿ ದರ್ಶನ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿ ಮೋಹನ್ ರಾಜ್ಗೆ ನೋಟಿಸ್ ನೀಡಿದ್ದರು. ಅದರಂತೆ ವಿಚಾರಣೆಗೆ ಹಾಜರಾಗಿದ್ದ ಮೋಹನ್ ರಾಜ್ ಅವರನ್ನು ತನಿಖಾಧಿಕಾರಿ ಪ್ರಕರಣ ಹಾಗೂ ನಟ ದರ್ಶನ್ಗೆ ನೀಡಿದ್ದ ಹಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಟ ದರ್ಶನ್ ನಿಮ್ಮ ಬಳಿ ಹಣ ಪಡೆದಿದ್ದರ ಉದ್ದೇಶವೇನು ? ಈ ಹಣದ ಮೂಲ ಏನು ? ರೇಣುಕಸ್ವಾಮಿ ಕೊಲೆ ಬಗ್ಗೆ ನಿಮಗೆ ಮಾಹಿತಿ ಇತ್ತೆ? ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿದ್ದಾರೆ.