ಉಡುಪಿ : ಕೇವಲ ಅಧಿಕಾರದ ಲಾಲಸೆಯಿಂದ ಯಾವುದೇ ಹಣಕಾಸಿನ ವ್ಯವಸ್ಥೆ ಇಲ್ಲದೆ ಬೇಕಾಬಿಟ್ಟಿ ನಕಲಿ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರದ ಗದ್ದುಗೆಯೇರಿ ಎಸ್.ಸಿ., ಎಸ್.ಟಿ. ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಸೀಮೆಯ ಅಹಿಂದ ನಾಯಕ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಎಸ್.ಸಿ.ಎಸ್.ಪಿ., ಟಿ.ಎಸ್.ಪಿ. ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳ ಮೂಲಸೌಕರ್ಯ ಅಭಿವೃದ್ಧಿಗೆ ಮಾತ್ರ ಬಳಸಬೇಕೆಂಬ ನಿಯಮವಿದೆ. ಆದರೆ ಆನೆ ನಡೆದದ್ದೇ ದಾರಿ ಎಂಬಂತೆ ವಿತoಡ ವಾದದೊಂದಿಗೆ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಸದ್ರಿ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿ ತಾನೆಂತಹ ದಲಿತ ವಿರೋಧಿ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಬೀತುಪಡಿಸಿದ್ದಾರೆ.
ಈ ಹಿಂದೆ ಎಸ್.ಸಿ.ಎಸ್.ಪಿ., ಟಿ.ಎಸ್.ಪಿ. ಗೆ ಮೀಸಲಿಟ್ಟ 11,000 ಕೋಟಿ ರೂಪಾಯಿ ಹಣವನ್ನು ಉಚಿತ ಗ್ಯಾರಂಟಿಗಳಿಗೆ ಬಳಸಿದ್ದ ಸಿ.ಎಂ. ಸಿದ್ದರಾಮಯ್ಯ ಪ್ರಸಕ್ತ ವರ್ಷದಲ್ಲಿ ಸುಮಾರು 15,000 ಕೋಟಿ ರೂಪಾಯಿ ಹಣವನ್ನು ಗ್ಯಾರಂಟಿಗಳ ಉದ್ದೇಶಕ್ಕೆ ಬಳಸುವ ಯೋಜನೆಯನ್ನು ಹಾಕಿಕೊಂಡಿರುವುದು ಅತ್ಯಂತ ಖಂಡನೀಯ ಎಂದು ಅವರು ತಿಳಿಸಿದ್ದಾರೆ.
ತನ್ನನ್ನು ತಾನು ಮಹಾನ್ ಆರ್ಥಿಕ ತಜ್ಞ ಎಂದು ಬಿಂಬಿಸುತ್ತಾ, ರಾಜ್ಯದ ಅಭಿವೃದ್ಧಿಗೆ ಚಿಕ್ಕಾಸನ್ನೂ ನೀಡದೆ, ಉಚಿತ ಗ್ಯಾರಂಟಿಗಳಿಗೂ ಹಣ ಹೊಂದಿಸಲು ವಿಫಲವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಬೊಕ್ಕಸವನ್ನು ಬರಿದಾಗಿಸಿ ಜನತೆಗೆ ವಿಪರೀತ ಬೆಲೆ ಏರಿಕೆ, ತೆರಿಗೆ ಹೆಚ್ಚಳದ ಬರೆಯನ್ನು ಹಾಕಿರುವ ಜೊತೆಗೆ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಣವನ್ನು ದುರ್ಬಳಕೆ ಮಾಡುವ ಹೀನ ಕೃತ್ಯಕ್ಕೆ ಮುoದಾಗಿರುವುದು ಅತ್ಯಂತ ಶೋಚನೀಯ.
ಮಾತೆತ್ತಿದರೆ ದಲಿತರ ಕಲ್ಯಾಣ ಎಂದು ಬೊಗಳೆ ಬಿಡುವ ಸಿ.ಎಂ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ನಕಲಿ ಗ್ಯಾರಂಟಿಗಳಿಗಾಗಿ ದಲಿತ ಸಮುದಾಯದ ಹಿತವನ್ನು ಬಲಿಕೊಟ್ಟಿರುವುದು ನಾಚಿಕೆಗೇಡು. ನಕಲಿ ಗ್ಯಾರಂಟಿಗಳಿಂದ ತಾನು ಕೈಸುಟ್ಟುಕೊಂಡಿದ್ದರೂ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕೂಡಾ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಎಂದು ಪುಕ್ಕಟೆ ಸಲಹೆ ನೀಡಿರುವ ಸಿದ್ದರಾಮಯ್ಯ ವರ್ತನೆ ತೀರಾ ಹಾಸ್ಯಾಸ್ಪದವಾಗಿದೆ. ಜನರ ತೆರಿಗೆ ಹಣದಲ್ಲೇ ಉಚಿತ, ಖಚಿತ, ನಿಶ್ಚಿತ, ಖಂಡಿತ ಎನ್ನುವ ಘೋಷ ವಾಕ್ಯದೊಂದಿಗೆ ಮಂಕುಬೂದಿ ಎರಚುತ್ತಿರುವ ಜೊತೆಗೆ ಸಾಲು ಸಾಲು ಹಗರಣಗಳಲ್ಲಿ ಮುಳುಗಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆ.ಉದಯ ಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.