ಬೆಂಗಳೂರು : ಜಿಲ್ಲಾಧಿಕಾರಿಗಳಿಗೆ ನಾವೇ ಮಹಾರಾಜರು ಎನ್ನುವ ಭಾವನೆ ಬೇಡ. ರಾಜಕಾರಣಿ ಮತ್ತು ಅಧಿಕಾರಿಗಳು ಇಬ್ಬರೂ ಜನ ಸೇವಕರು ಎಂಬುದನ್ನು ಅರಿತು ಜನರ ಸಮಸ್ಯೆ ಪರಿಹರಿಸಿ. ನನ್ನವರೆಗೂ ಜನರ ಅಹವಾಲು ಬರುತ್ತಿವೆ ಎಂದರೆ ನೀವು ಜನರನ್ನು ಭೇಟಿ ಮಾಡುತ್ತಿಲ್ಲ ಎಂದರ್ಥ. ಇನ್ನು ಈ ನಿರ್ಲಕ್ಷ್ಯ ಮುಂದುವರೆದರೆ ಹಿರಿಯ ಅಧಿಕಾರಿಗಳನ್ನೇ ಹೊಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ರವರೆಗೆ ಸುದೀರ್ಘವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಉಸ್ತುವಾರಿ ಕಾರ್ಯ ದರ್ಶಿಗಳ ಸಭೆ ನಡೆಸಿದ ಅವರು ಇಲಾಖಾ ವಾರು ಸಮಸ್ಯೆಗಳನ್ನು ಪ್ರಸ್ತಾಪಿಸಿ ಅಧಿಕಾರಿಗಳಿಗೆ ಚಾಟಿ ಬೀಸಿದರು.
ಅತಿವೃಷ್ಟಿಯಿಂದ ಉಂಟಾಗಬಹುದಾದ ನೆರೆ ಸಮಸ್ಯೆಗಳ ನಿಯಂತ್ರಣಕ್ಕೆ ಕ್ರಮ, ಆರ್ಥಿಕ ಪರಿಹಾರ, ರೈತರ ಸಮಸ್ಯೆಗಳಿಗೆ ಸ್ಪಂದನೆ, ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರದ ಬಗ್ಗೆ ಚರ್ಚೆ ನಡೆಸಿದರು