ಬೆಂಗಳೂರು : ಕಾಂಗ್ರೆಸ್‌ನ ಪ್ರಮುಖ ಇಬ್ಬರು ಶಾಸಕರಿಗೆ ಉರುಳಾಗಿ ಪರಿಣಮಿಸಿರುವ ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರದ ಬಗ್ಗೆ ಎಸ್ ಐ ಟಿ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ತಮ್ಮ ತನಿಖೆಯನ್ನು ತೀವ್ರಗೊಳಿಸಿವೆ. ಬುಧವಾರ ಕಾಂಗ್ರೆಸ್ ಶಾಸಕರಾದ ಬಿ.ನಾಗೇಂದ್ರ ಹಾಗೂ ಬಸವನಗೌಡ ದದ್ದಲ್ ಮನೆ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದ ಇ.ಡಿ. ಗುರುವಾರವೂ ಇಬ್ಬರ ಮನೆ, ಫ್ಲ್ಯಾಟ್‌ಗಳ ಮೇಲಿನ ದಾಳಿ ಮುಂದುವರಿಸಿದೆ. ಈ ವೇಳೆ. ನಾಗೇಂದ್ರ ಅವರ ಇಬ್ಬರು ಆಪ್ತರು ಹಾಗೂ ದದ್ದಲ್ ಅವರ ಭಾಮೈದ, ಸಹೋದರಿ ಸೇರಿ ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದೆ. ಡಾಲರ್ಸ್ ಕಾಲೋನಿಯಲ್ಲಿರುವ ನಾಗೇಂದ್ರ ಅವರ ಮನೆಯಲ್ಲೇ ಬುಧವಾರದಿಂದ ನಿರಂತರ ದಾಖಲೆ ಪರಿಶೀಲನೆ ನಡೆಸುತ್ತಿದ್ದ ಇ.ಡಿ. ಅಧಿ ಕಾರಿಗಳು ಗುರುವಾರ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿ ನಾಗೇಂದ್ರ ಅವರ ಖಾತೆಯ ಮಾಹಿತಿ ಪಡೆದರು. ಅಲ್ಲದೆ ನಾಗೇಂದ್ರ ಬಳಸುತ್ತಿದ್ದ ಮೊಬೈಲ್ ಹಾಗೂ ಕಂಪ್ಯೂಟರ್‌ಗಳ ಡೇಟಾ, ಇನ್ನಿತರ ಡಿಜಿಟಲ್ ಸಾಕ್ಷ್ಯಾಧಾರಗಳನ್ನು ವಶಕ್ಕೆ ಪಡೆದು ಇಂಚಿಂಚು ಪರಿಶೀಲನೆ ನಡೆಸಿದರು.
ನಾಗೇಂದ್ರ ಪಿ.ಎ ಹರೀಶ್ ಅವರನ್ನು ತೀವ್ರವಾಗಿ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ವಿಚಾರಣೆ ವೇಳೆ ಮಲ್ಲೇಶ್ವರದ ಖಾಸಗಿ ಹೋಟೆಲ್ ಬಳಿ ಅವ್ಯವಹಾರದ ಬಗ್ಗೆ ಚರ್ಚೆ ನಡೆಸಲಾಯಿತು. ಇದಕ್ಕೆ 25 ಲಕ್ಷ ರೂ. ಪಡೆದಿರುವುದಾಗಿ ಹರೀಶ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಶಾಸಕ ನಾಗೇಂದ್ರ ಅವರ ಬಂಧನವಾಗುವ ಸಾಧ್ಯತೆಯಿದೆ ಎಂದು ಮೂಲಗಳು ದೃಢೀಕರಿಸಿವೆ