- ಕೊನೆಗಾಲದ ಕಾಮನೆ
ಹುಟ್ಟು ಮತ್ತು ಸಾವಿನ ಸಂಬಂಧ ಇಷ್ಟೊಂದು ಗಾಢವಿದೆ ಎಂದಾದರೆ ಜನನ-ಮರಣದ ಈ ಚಕ್ರದಿಂದ ಮುಕ್ತಿಯನ್ನು ಪಡೆಯುವುದಾದರೂ ಸಾಧ್ಯವಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಆ ಪ್ರಶ್ನೆಗೆ ಉತ್ತರ ಹುಡುಕುವ ಮೊದಲು ನಾವು ಈ ಭೂಮಿಯಲ್ಲಿ ಜನಿಸಿರುವುದಕ್ಕೆ ಮುಖ್ಯವಾದ ಕಾರಣವಾದರೂ ಏನು ಎಂಬ ಬಗ್ಗೆ ವಿಚಾರ ಮಾಡುವುದು ಅಗತ್ಯ. ಮನಸ್ಸು ಕಾಮನೆಗಳ ಉಗ್ರಾಣವೆಂಬ ಸತ್ಯವನ್ನು ನಾವು ಈಗಾಗಲೇ ಅರಿತಿದ್ದೇವೆ. ಮನಸ್ಸೆಂಬ ಉಗ್ರಾಣದಲ್ಲಿ ಆಸೆ-ಆಕಾಂಕ್ಷೆಗಳು ನಿರಂತರವಾಗಿ ಜನ್ಮತಳೆಯುತ್ತಲೇ ಇರುತ್ತವೆ. ಅವುಗಳನ್ನು ಈಡೇರಿಸುತ್ತಲೇ ಇರುವ ಕಾಯಕದಲ್ಲಿ ನಮ್ಮನ್ನು ನಾವು ನಿರಂತರವಾಗಿ ತೊಡಗಿಸಿಕೊಂಡಿದ್ದೇವೆ. ಒಂದು ಆಸೆ ಪೂರೈಸುತ್ತಲೇ ನೂರು ಆಸೆಗಳು ಅದರ ಸ್ಥಾನವನ್ನು ಆಕ್ರಮಿಸುತ್ತವೆ ಎನ್ನುವುದನ್ನು ಅನುಭವದಿಂದ ಅರಿತಿದ್ದೇವೆ. ಬದುಕಿನ ಉದ್ದಕ್ಕೂ ಸಾಗುವುದು ಆಸೆಗಳ ಪೂರೈಕೆಯ ಹೋರಾಟವೇ ಆಗಿದೆ. ಹಾಗಾಗಿಯೇ ದುಃಖವು ನಿರಂತರವಾಗಿ ನಮ್ಮನ್ನು ಅಂಟಿಕೊಂಡೇ ಇದೆ. ಕೊನೆಗಾಲ ಸಮೀಪಿಸಿದರೂ ಈಡೇರದ ಆಸೆಗಳು ಇನ್ನೂ ಅಗಣಿತವಾಗಿಯೇ ಉಳಿದಿರುತ್ತವೆ. ನಿಜಕ್ಕಾದರೆ ಈ ಆಸೆಗಳೇ ನಮ್ಮನ್ನು ಜನನ-ಮರಣದ ಚಕ್ರಕ್ಕೆ ಬಂಧಿಸುವ ಮೂಲ ಸಾಧನಗಳಾಗಿವೆ. ನಾವು ಜನ್ಮತಳೆದಿರುವುದಕ್ಕೆ ಮೂಲ ಕಾರಣಗಳೇ ಈಡೇರದ ಆಸೆಗಳು ಮತ್ತು ಅವುಗಳ ಮೊತ್ತವೇ ಆಗಿದೆ. ಹಾಗಾಗಿ ಕೊನೆಗಾಲ ಸಮೀಪಿಸಿದಾಗ ಯಾವೆಲ್ಲ ಕಾಮನೆಗಳನ್ನು ಮನದಲ್ಲಿ ಉಳಿಸಿಕೊಂಡಿರುವೆವೋ ಅವುಗಳ ಈಡೇರಿಕೆಗಾಗಿಯೇ ಮತ್ತೆ ಮತ್ತೆ ಜನಿಸಿ ಬರುವೆವು. ಈ ಜನನ-ಮರಣದ ಚಕ್ರದಿಂದ ಮುಕ್ತಿ ಪಡೆಯಲು ಕೊನೆಗಾಲದಲ್ಲಾದರೂ ದೇವರ ನಾಮವನ್ನು ಸ್ಮರಿಸುವುದೊಂದೇ ಉಪಾಯ.