ಮಂಗಳೂರು: ನಗರದ ಕಪಿತಾನಿಯಾ ಬಳಿ ಜು.8ರಂದು ನಡೆದ ದಿನಸಿ ಅಂಗಡಿಯಿಂದ 10 ಲಕ್ಷ ರೂ.ನಗದು ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಕಂಕನಾಡಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶ ಮೂಲದ ಮಹಮ್ಮದ್ ನಜೀರ್ ಹೌಸಿಲ್ ಖಾನ್ (27) ಹಾಗೂ ಇಲಿಯಾಸ್ ಖಾನ್ (22) ಬಂಧಿತ ಆರೋಪಿಗಳಾಗಿದ್ದಾರೆ. ಕಂಕನಾಡಿ ನಗರ ಠಾಣಾ ನಿರೀಕ್ಷಕ ಟಿ.ಡಿ. ನಾಗರಾಜ್ ನೇತೃತ್ವದಲ್ಲಿ ತನಿಖಾ ತಂಡ ಆರೋಪಿಗಳನ್ನು ತ್ವರಿತವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
ಆರೋಪಿಗಳನ್ನು ಪುಣೆಯಲ್ಲಿ ಬಂಧಿಸಲಾಗಿದ್ದು, ಬಳಿಕ ಪುಣೆ ನ್ಯಾಯಾಲಯದಲ್ಲಿ ಟ್ರಾನ್ಸಿಟ್ ವಾರೆಂಟ್ ಪಡೆದು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿಗಳ ಪೂರ್ವ ಹಿನ್ನೆಲೆಯ ಬಗ್ಗೆ ಹೆಚ್ಚಿನ ತನಿಖೆಯ ನಡೆಸುವ ಸಲುವಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.