ಕೋಟ: ಗಾಣಿಗ ಯುವ ಸಂಘಟನೆ ಕೋಟ ಘಟಕ ಆಶ್ರಯದಲ್ಲಿ, ಗಾಣಿಗ ಮಹಿಳಾ ಸಂಘಟನೆ ಹಾಗೂ ಹಾರಾಡಿ ಮಹಾಬಲ ಗಾಣಿಗರ ಕುಟುಂಬ ಸಹಕಾರದೊಂದಿಗೆ 2024ನೇ ಸಾಲಿನ ದಿ.ಹಾರಾಡಿ ಮಹಾಬಲ ಗಾಣಿಗ ಸಂಸ್ಮರಣೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಯುವ ಸಂಗಮ ಜು.14ರಂದು ಸಾಲಿಗ್ರಾಮ ಗಿರಿಜಾ ಕಲ್ಯಾಣ ಮಂಟಪದಲ್ಲಿ ಜರಗಿತು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೆ ಗಾಣಿಗ ಸಮಾಜದ ಕೊಡುಗೆ ಅಪಾರವಾದರೆ. ಅದರಲ್ಲೂ ಹಾರಾಡಿ ಮನೆತನ ಯಕ್ಷಗಾನ ಕ್ಷೇತ್ರದಲ್ಲಿ ಚಿರಸ್ಥಾಯಿಯಾದ ಹೆಸರಾಗಿದೆ. ಹಾರಾಡಿ ದಿ.ಮಹಾಬಲ ಗಾಣಿಗರ ಸಂಸ್ಮರಣೆಗಾಗಿ ಸ್ಥಾಪಿಸಿರುವ ಈ ಪ್ರಶಸ್ತಿ ಗೌರವಯುತವಾಗಿದೆ ಎಂದರು.
ಹಿರಿಯ ಯಕ್ಷಗಾನ ವಿದ್ವಾಂಸ ಗುಂಡ್ಮಿ ಸದಾನಂದ ಐತಾಳ ಮಾತನಾಡಿ, ಯಕ್ಷಗಾನ ಕ್ಷೇತ್ರದಲ್ಲಿ ಜೋಡೆ ಕೋರೆ ಮುಂಡಾಸು ಮಹಾಬಲ ಗಾಣಿಗರಿಗೇ ಮೀಸಲಾಗಿತ್ತು. ಅವರ ನಿಧನದ ಅನಂತರ ವೃತ್ತಿ ರಂಗದಲ್ಲಿ ಈ ವಿಶೇಷ ಸಂಪೂರ್ಣ ಮರೆಯಾಯಿತು. ಹಿರಿಯ ಕಲಾವಿದರನ್ನು ನೆನಪಿಸಿಕೊಳ್ಳುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ಈ ಸಂದರ್ಭ ಮಂದಾರ್ತಿ ಮೇಳದ ಎರಡನೇ ವೇಷಧಾರಿ, ಹಿರಿಯ ಕಲಾವಿದ ಆಜ್ರಿ ಗೋಪಾಲ ಗಾಣಿಗರಿಗೆ ಹಾರಾಡಿ ಮಹಾಬಲ ಗಾಣಿಗ ಸಂಸ್ಮರಣೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಾಣಿಗ ಯುವ ಸಂಘಟನೆ ಕೋಟ ಘಟಕದ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಪ್ರಗತಿಪರ ಕೃಷಿಕರಾದ ಚಂದ್ರಶೇಖರ್ ಗಾಣಿಗ ಹಂದಟ್ಟು, ಸಾಸ್ತಾನ ಸಹಕಾರಿ ಸಂಘದ ನಿರ್ದೇಶಕ ಆನಂದ ಗಾಣಿಗ ಮಾಬುಕಳ ಹಾಗೂ ಗಾಣಿಗ ಸಮಾಜದಲ್ಲಿ ಎಸೆಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಮ್ಮಾನ, ದಿ.ವಸಂತಿ ಹಾಗೂ ದಿ. ಸುಬ್ಬ ಗಾಣಿಗ ಐರೋಡಿ ಸ್ಮರಣಾರ್ಥ ಸಂತೋಷ್ ಕುಮಾರ್ ಮತ್ತು ಶೇವಧಿ ಸುರೇಶ್ ಗಾಣಿಗ ಕೊಡಮಾಡಿದ ಶೈಕ್ಷಣಿಕ ಪರಿಕರಗಳ ವಿತರಣೆ ನಡೆಯಿತು.
ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಟಪಾಡಿ, ಉಪಾಧ್ಯಕ್ಷ ಉದಯ ಕುಮಾರ್ ಕೆ., ಶೇವಧಿ ಸುರೇಶ್ ಗಾಣಿಗ, ಉದ್ಯಮಿ ನಿತೀನ್ ನಾರಾಯಣ, ಜಿಲ್ಲಾ ಯುವ ಸಂಘಟನೆ ಅಧ್ಯಕ್ಷ ದಿನೇಶ್ ಗಾಣಿಗ ಕೋಟ, ಕೋಟ ಘಟಕದ ಗೌರವಾಧ್ಯಕ್ಷ ಪ್ರಶಾಂತ್ ಗಾಣಿಗ ಕಾರ್ಕಡ, ಮಹಿಳಾ ಸಂಘಟನೆ ಅಧ್ಯಕ್ಷೆ ರೇಖಾ ಗಣೇಶ್, ಮಹಾಬಲ ಗಾಣಿಗ ಮಕ್ಕಳಾದ ವಿಶ್ವನಾಥ ಕಾರ್ತಟ್ಟು, ಜನಾರ್ಧನ ಬ್ರಹ್ಮಾವರ, ವಸಂತಿರಾಜು ಕಾರ್ತಟ್ಟು ಮತ್ತು ಕುಟುಂಬ ಸದಸ್ಯರು ಇದ್ದರು.
ಸಂಘಟನೆಯ ಕಾರ್ಯದರ್ಶಿ ಆರ್.ಕೆ. ಬ್ರಹ್ಮಾವರ ಸ್ವಾಗತಿಸಿ, ನಾಗರಾಜ್ ಗಾಣಿಗ ಸಾಲಿಗ್ರಾಮ ಪ್ರಾಸ್ತಾವಿಕ ಮಾತನಾಡಿದರು. ವಿಶ್ವನಾಥ ಗಾಣಿಗ ಅತಿಥಿಗಳನ್ನು ಪರಿಚಯಿಸಿ, ರಾಜೇಶ್ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಆನಂದ ಮಾಬುಕಳ ವಂದಿಸಿದರು.
ಸಭಾ ಕಾರ್ಯಕ್ರಮದ ಅನಂತರ ಯಕ್ಷಗಾನದ ಇತಿಹಾಸದಲ್ಲೇ ಅಪರೂಪಕ್ಕೆ ಸಮಗ್ರ ಗಾಣಿಗ ಕಲಾವಿದರಿಂದ ಕೂಡಿದ ಭೀಷ್ಮವಿಜಯ ಯಕ್ಷಗಾನ ನಡೆಯಿತು.