ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಎಸ್ಐಟಿ ಪೊಲೀಸರ ತನಿಖೆ ಎದುರಿಸಿದ ಬಳಿಕ ಜಾರಿ ನಿರ್ದೇಶನಾಲಯದ (ಇಡಿ) ಬಂಧನ ಭೀತಿಯಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ವಿಧಾನಸಭೆಯ ಅಧಿವೇಶನ ವೇಳೆ ಪ್ರತ್ಯಕ್ಷರಾದರು. ಎಸ್ಐಟಿ ವಿಚಾರಣೆ ಎದುರಿಸಿದ ದದ್ದಲ್ ಅವರು ತಮ್ಮ ಸ್ವಜಿಲ್ಲೆ ರಾಯಚೂರಿಗೆ ತೆರಳಿದ್ದರು. ಬಳಿಕ ಕಾಣದೇ ಇದ್ದಾಗ ನಾಪತ್ತೆಯಾಗಿದ್ದಾರೆ ಎಂಬ ದಟ್ಟ ವದಂತಿ ಹಬ್ಬಿತ್ತು. ಆದರೆ, ಸೋಮವಾರ ದಿಢೀರನೆ ವಿಧಾನಸೌಧಕ್ಕೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ ಕೆಲಕಾಲ ಸಮಾಲೋಚನೆ ನಡೆಸಿದರು.
ಈ ವೇಳೆ ಮಾತನಾಡಿದ ದದ್ದಲ್, ನಾನು ನಾಪತ್ತೆಯಾಗಿರಲಿಲ್ಲ. 2 ದಿನಗಳಿಂದ ನನ್ನ ಕ್ಷೇತ್ರಕ್ಕೆ ತೆರಳಿದ್ದೆ ಎಂದು ಸ್ಪಷ್ಟನೆ ನೀಡಿದರು.