ಅಂಕೋಲಾ : ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತದಿಂದಾಗಿ ಭಾರೀ ಪ್ರಮಾಣದಲ್ಲಿ ಅನಾಹುತ ಸಂಭವಿಸಿದ್ದು ಒಂದೇ ಕುಟುಂಬದ ಐದು ಜನರು ಸೇರಿದಂತೆ ಸುಮಾರು 15 ಜನರು ಮಣ್ಣಿನ ಅಡಿ ಸಿಲುಕಿರುವ ಅಥವಾ ಮಣ್ಣಿನ ಜೊತೆಗೆ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ವ್ಯಕ್ತವಾಗಿದೆ.
ಈ ದುರ್ಘಟನೆ ಮಂಗಳವಾರ ಬೆಳಗ್ಗೆ 8.45 ರ ಸುಮಾರಿಗೆ ಸಂಭವಿಸಿದೆ. ಗುಡ್ಡ ಕುಸಿದ ಸ್ಥಳದಲ್ಲಿ ಇದ್ದ ಮೂರು ಅಂಗಡಿಗಳು ಮತ್ತು ಒಂದು ಮನೆ ಮಣ್ಣಿನ ಅಡಿ ಸಿಲುಕಿದ್ದು ಶಿರೂರಿನಲ್ಲಿ ಚಹಾ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣ ಬೊಮ್ಮಯ್ಯ ನಾಯ್ಕ(47), ಅವರ ಪತ್ನಿ ಶಾಂತಿ ಲಕ್ಷ್ಮಣ ನಾಯ್ಕ (36) ಮನೆಯಲ್ಲಿ ಇದ್ದ ಅವರ ಮಗ ರೋಶನ (11) ಇವರ ಶವಗಳು ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗೆಕೊಳ್ಳ ದುಬ್ಬನಸಸಿ ಕಡಲ ತೀರದಲ್ಲಿ ಸಂಜೆ ಪತ್ತೆಯಾಗಿದೆ. ಜೊತೆಗೆ ಪುರುಷನೋರ್ವನ ಶವ ಪತ್ತೆಯಾಗಿದ್ದು ಈತನ ಗುರುತು ಸಿಕ್ಕಿಲ್ಲ.
ಮೃತರ ಮಗಳು ಆವಂತಿಕಾ(6) ಮತ್ತು ಅವರ ಮನೆಗೆ ಹಿಂದಿನ ದಿನ ಬಂದು ಉಳಿದುಕೊಂಡಿದ್ದ ಅವರ ಸಂಬಂಧಿ ಜಗನ್ನಾಥ (55) ಎನ್ನುವವರು ಕಣ್ಮರೆಯಾಗಿದ್ದು ಅವರು ಬದುಕಿರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.
ಒಂದು ಮನೆಯ ಐದು ಜನರು ಸೇರಿದಂತೆ ಒಟ್ಟು ಏಳು ಜನರು ಮೃತ ಪಟ್ಟಿದ್ದು ಚಹಾ ಹೊಟೇಲ್ ಬಳಿ ಎಷ್ಟು ಜನರಿದ್ದರು ಎನ್ನುವುದು ಖಚಿತವಾಗಿಲ್ಲ