ಕುಂದಾಪ್ರ : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಪ್ರತೀ ಬಾರಿಯೂ ಕೂಡಾ ಕರ್ಕಾಟಕ ಅಮಾವಾಸ್ಯೆಯ ದಿನ ಆಚರಣೆ ಮಾಡುವಂತಹ ಸಂಪ್ರದಾಯ ಇತ್ತೀಚಿನ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆ ಪ್ರಯುಕ್ತ ಆಗಸ್ಟ್ 4 ರಂದು ಆಟಿ ಅಮಾವಾಸ್ಯೆಯ ದಿನ, ಅಂದೇ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಸಂಭ್ರಮ. ಈ ಸಂಭ್ರಮವನ್ನು ಕೇವಲ ಕುಂದಾಪುರದಷ್ಟೇ ಅಲ್ಲದೇ ವಿಶ್ವದಾದ್ಯಂತ ಎಲ್ಲೆಲ್ಲ ಕುಂದಾಪ್ರ ಕನ್ನಡ ಭಾಷಿಕರು ವಾಸಿಯಾಗಿದ್ದಾರೆ ಅಲ್ಲಿ ಅದರ ಆಚರಣೆಯನ್ನು ಮಾಡಲಾಗುತ್ತಿದೆ.
ನಾವು ಕಲಾಕ್ಷೇತ್ರ-ಕುಂದಾಪುರ ಸಂಸ್ಥೆ ವಿಭಿನ್ನವಾದಂತಹ ಯೋಚನೆಯೊಂದನ್ನು ಮಾಡಿ ಭಾಷೆಯ ಹೆಸರಿನಲ್ಲಿ ಕ್ರೀಡಾಕೂಟವನ್ನು ನಡೆಸಬೇಕು ಎನ್ನುವಂತಹ ಯೋಜನೆಗೆ ಕೈಹಾಕಿದ್ದೇವೆ. ಇತ್ತೀಚಿನ ದಿನಗಳಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಕ್ರೀಡೆಗಳ ಆಯೋಜನೆ ಆಗ್ತಾ ಇದೆ. ಆದರೆ ಭಾಷೆಯ ಹೆಸರಿನಲ್ಲಿ ಒಂದು ಕ್ರೀಡಾ ಕೂಟ ಆಗುತ್ತಿರುವುದು ಕುಂದಾಪುರದಲ್ಲಿ ಪ್ರಥಮ ಬಾರಿಗೆ. ಈ ಗ್ರಾಮೀಣ ಕ್ರೀಡಾ ಕೂಟ ಕಲಾಕ್ಷೇತ್ರದ ನೇತೃತ್ವದಲ್ಲಿ ನಡೆದರೂ ಕೂಡ, ಇದಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಭಾಗಿತ್ವ ಮತ್ತು ಕುಂದಾಪ್ರ ಕನ್ನಡ ಮಾತನಾಡುವ ಭಾಗಗಳಾದ ಕುಂದಾಪುರ, ಬೈಂದೂರು, ಬ್ರಹ್ಮಾವರ ಮತ್ತು ಹೆಬ್ರಿ ತಾಲೂಕು ಆಡಳಿತದಿಂದ ಸಹಕಾರವನ್ನು ಕೋರಲಾಗಿದೆ. ಹಾಗೂ ಉಡುಪಿ ಜಿಲ್ಲೆಯ ಶಾಸಕರುಗಳನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವಂತಹ ವಿನಂತಿಯನ್ನು ಮಾಡಿದ್ದೇವೆ. ಮತ್ತು ಅವರು ತಮ್ಮ ಸಹಮತವನ್ನು ಸೂಚಿಸಿರುತ್ತಾರೆ.
ಇದೊಂದು ಅಭೂತಪೂರ್ವ ಕಾರ್ಯಕ್ರಮ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಹೆಸರಿನಲ್ಲಿ ನಮ್ಮ ಕ್ರೀಡೆಗಳು ನೇಪಥ್ಯಕ್ಕೆ ಸರಿದು ಹೋಗುತ್ತಲಿದೆ. ಮುಂದಿನ ಜನಾಂಗಗಳು ನಮ್ಮ ಭಾಷೆ, ಸಂಸ್ಕ್ರತಿಯನ್ನು ನೆನಪಿನಲ್ಲಿಟ್ಟುಕೊಂಡು ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವಂತಹ ಉದ್ದೇಶವೂ ಕೂಡಾ ಈ ಕ್ರೀಡಾ ಕೂಟದ ಆಯೋಜನೆಯ ಹಿಂದಿದೆ.
ಹಾಗಾಗಿ ಸಮಾಜಕ್ಕೆ ಮಾದರಿಯಾಗುವಂತಹ ಇಂತಹ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡ ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ನ ಈ ಕಾರ್ಯಕ್ರಮಕ್ಕೆ ದೃಶ್ಯ ಮಾದ್ಯಮದವರು, ಪತ್ರಿಕಾ ಮಾದ್ಯಮದವರು ಅತೀ ಹೆಚ್ಚಿನ ಪ್ರಚಾರವನ್ನು ನೀಡುವುದರ ಮುಖೇನ ಅಂದಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ತಾವು ವಹಿಸಬೇಕು ಎನ್ನುವ ವಿನಂತಿಯನ್ನು ನಾವು ಮಾಡುತ್ತಿದ್ದೇವೆ.
ಹಗ್ಗಜಗ್ಗಾಟ ಮತ್ತು ತ್ರೋಬಾಲ್ಗೆ ಹೆಸರನ್ನು ನೋಂದಾಯಿಸಲು ಕಡೆಯ ದಿನಾಂಕ: 22/07/2024 ಆಗಿದ್ದು ಹೆಚ್ಚಿನ ಮಾಹಿತಿಗಾಗಿ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಅಧ್ಯಕ್ಷ ಕಿಶೋರ್ ಕುಮಾರ್ ತಿಳಿಸಿರುತ್ತಾರೆ.
ಕಾರ್ಯಕ್ರಮ ನಡೆಯುವ ಸ್ಥಳ: ಬೋರ್ಡ್ ಹೈಸ್ಕೂಲ್ ಕುಂದಾಪುರ
ಬೆಳಿಗ್ಗೆ:9.00 ರಿಂದ ಸಂಜೆ 6.00 ರ ತನಕ