ಬೆಂಗಳೂರು : ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಹಣ ವರ್ಗಾವಣೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ದಿನ ಸಮೀಪಿಸಿದೆ ಎಂದು ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ ಇವತ್ತು ರಾಜ್ಯದಲ್ಲಿ ಉದ್ಭವವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹಣಕಾಸು ಇಲಾಖೆ ಸಚಿವರೂ ಆದ ಮುಖ್ಯಮಂತ್ರಿಗಳ ಸಮ್ಮತಿ ಇಲ್ಲದೇ ಅವರ ಗಮನಕ್ಕೆ ಬಾರದೆ ಹಣ ವರ್ಗಾವಣೆ ಆಗಲು ಸಾಧ್ಯವೇ ಇರಲಿಲ್ಲ ಎಂದು ಹೇಳಿದರು. ಕೇವಲ ಮಾಜಿ ಸಚಿವ ನಾಗೇಂದ್ರ, ನಿಗಮದ ಅಧ್ಯಕ್ಷ ದದ್ದಲ್ ಅವರಷ್ಟೇ ಅಲ್ಲದೆ ಇನ್ನೂ ದೊಡ್ಡ ದೊಡ್ಡವರ ಹೆಸರು ಮುಂದೆ ಬರಲಿದೆ. ಹಾಗಾಗಿ ಆತಂಕದಿಂದಲೇ ರಾಜ್ಯದ ಐದು ಸಚಿವರು ಇ.ಡಿ. ಮೇಲೆ ಆಪಾದನೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದರು.