Home » ತಮ್ಮ ಭ್ರಷ್ಟಾಚಾರವನ್ನು ಮಚ್ಚಿಹಾಕಲು ಸಿ ಎಂ ಕುತಂತ್ರ
 

ತಮ್ಮ ಭ್ರಷ್ಟಾಚಾರವನ್ನು ಮಚ್ಚಿಹಾಕಲು ಸಿ ಎಂ ಕುತಂತ್ರ

: ಕಿಶೋರ್ ಕುಮಾರ್ ಕುಂದಾಪುರ

by Kundapur Xpress
Spread the love

ಉಡುಪಿ : ವಾಲ್ಮೀಕಿ ನಿಗಮ ಹಗರಣ, ಮುಡಾ ಸೈಟು ಹಗರಣ, ಎಸ್.ಸಿ. ಎಸ್.ಟಿ. ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣ ಗ್ಯಾರಂಟಿಗಳಿಗೆ ದುರುಪಯೋಗ, ಕಾರ್ಮಿಕ ಇಲಾಖೆ ಹಗರಣ, ಡಿಸಿಸಿ ಬ್ಯಾಂಕ್ ಹಗರಣ, ಅಲ್ಪಸಂಖ್ಯಾತ ಇಲಾಖೆ ಹಗರಣ, ಪ್ರವಾಸೋದ್ಯಮ ಇಲಾಖೆ ಹಗರಣ ಇವೇ ಮುಂತಾದ ಹಗರಣಗಳ ಸರಮಾಲೆಯಿಂದ ಕಂಗೆಟ್ಟ ರಾಜ್ಯ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮಾಜಿ ಸಚಿವರ ಮೇಲೆ ಮಾಡುತ್ತಿರುವ ಆರೋಪ, ತಮ್ಮ ಭ್ರಷ್ಟಾಚಾರವನ್ನು ಮಚ್ಚಿಹಾಕಲು ಮಾಡುತ್ತಿರುವ ಕುತಂತ್ರ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಣವನ್ನು ತೆಲಂಗಾಣಕ್ಕೆ ಕಳುಹಿಸಿ ಲೋಕಸಭಾ ಚುನಾವಣೆಗೆ ದುರ್ಬಳಕೆ ಮಾಡಿರುವ ಜೊತೆಗೆ ಮುಡಾ ಹಗರಣದಡಿಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಪತ್ನಿಯ ಹೆಸರಿನಲ್ಲಿ ಆಕ್ರಮವಾಗಿ ಸೈಟುಗಳನ್ನು ಪಡೆದಿರುವುದು ಜಗಜ್ಜಾಹೀರಾಗಿದೆ. ಈ ಎರಡೂ ಪ್ರಮುಖ ಹಗರಣಗಳು ಸೇರಿದಂತೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ 70 ಹಗರಣಗಳ ವಿವರಗಳನ್ನೊಳಗೊಂಡಿರುವ ಪುಸ್ತಕವನ್ನೇ ರಾಜ್ಯ ಬಿಜೆಪಿ ಬಿಡುಗಡೆ ಮಾಡಿದ್ದು, ಸುಮಾರು 35,000 ಕೋಟಿ ರೂಪಾಯಿಗಳ ಹಗರಣದ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಬೇಕಾಗಿದೆ.

ಈ ಎಲ್ಲಾ ಹಗರಣಗಳ ಸರದಾರ ಎನಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಹುಳುಕನ್ನು ಮುಚ್ಚಿಡುವ ವಿಫಲ ಯತ್ನದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿ.ಸುನಿಲ್ ಕುಮಾರ್ ಅವರ ವಿರುದ್ಧ ಯಾವುದೇ ಸಾಕ್ಷ್ಷ್ಯಾಧಾರವಿಲ್ಲದೇ ವೃಥಾ ಸುಳ್ಳು ಆರೋಪದಲ್ಲಿ ತೊಡಗಿರುವುದು ಹಾಸ್ಯಾಸ್ಪದ ಎಂದು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಮಂಡಲದಲ್ಲಿ ತನ್ನ ವಿರುದ್ಧ ಮಾಡಿರುವ ಆರೋಪವನ್ನು ಹಿಂಪಡೆಯಬೇಕು, ಇಲ್ಲವೇ ಸದ್ರಿ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು, ತಪ್ಪಿದಲ್ಲಿ ವಿಧಾನ ಸೌಧದ ಅವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸವಾಲೆಸೆದಿದ್ದಾರೆ.

ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ವಿಧಾನಸಭಾ ಕಲಾಪದಲ್ಲಿ ಆರೋಪ ಮಾಡಿರುವ ಸಿ.ಎಂ. ಸಿದ್ದರಾಮಯ್ಯ ದಮ್ಮು, ತಾಕತ್ತು ಇದ್ದರೆ ಈ ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿ ತನಿಖೆಗೋ ವಹಿಸಬೇಕು, ಸುಮ್ಮನೆ ಅಪಪ್ರಚಾರ ನಡೆಸಿದರೆ ತಿರುಗೇಟು ತಾಳುವುದಕ್ಕೂ ಸಿದ್ದರಾಗಿ ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಕೂಡಾ ಸವಾಲೆಸೆದಿದ್ದಾರೆ.

‘ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್’ ಎನ್ನುವಂತೆ ಸ್ವಯಂ ಭ್ರಷ್ಟಾಚಾರ, ಹಗರಣಗಳ ಕೂಪದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬಂತೆ ಬಿಜೆಪಿ ವಿರುದ್ಧ ಹುರುಳಿಲ್ಲದ ಆರೋಪದಲ್ಲಿ ತೊಡಗಿದ್ದರೂ ಯಾವುದೇ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿರುವುದು ನಾಚಿಕೆಗೇಡು. ಈ ಹಿಂದೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಸುಳ್ಳು ಜಾಹೀರಾತು ನೀಡಿ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಮುಖಭಂಗ ಅನುಭವಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿನ ಕೀಳು ಮಟ್ಟದ ಕುತಂತ್ರ ರಾಜಕಾರಣದ ಬಗ್ಗೆ ರಾಜ್ಯದ ಪ್ರಬುದ್ಧ ಜನತೆಗೆ ಚೆನ್ನಾಗಿಯೇ ಅರಿತಿದ್ದು, ಮುಂದಿನ ಎಲ್ಲ ಚುನಾವಣೆಗಳಲ್ಲಿ ಸಂವಿಧಾನ ವಿರೋಧಿ, ಜನ ವಿರೋಧಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   

Related Articles

error: Content is protected !!