ಬೈಂದೂರು : ಸರ್ಕಾರದ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಹೆಚ್ಚಿನ ಸಾರಿಗೆ ಸೌಲಭ್ಯವನ್ನು ಕಲ್ಪಿಸುವಂತೆ ಕೋರಿ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಬೇಡಿಕೆ ಗಳು ಬರುತ್ತಿದ್ದು ಅದರಂತೆ ಬೇಡಿಕೆ ಆಧರಿಸಿ ಮೊದಲ ಆದ್ಯತೆಯಲ್ಲಿ ವಿದ್ಯಾರ್ಥಿ ಗಳಿಗೆ ಸೂಕ್ತ ಬಸ್ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಸಾರಿಗೆ ಸಚಿವರಾದ ಶ್ರೀ ರಾಮ ಲಿಂಗ ರೆಡ್ಡಿಯವರು ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ. ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಗೆ ಉತ್ತರಿಸಿದ ಸಚಿವರು, ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕ ಪ್ರಯಾಣಿಕರು / ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಟ್ಟು 25 ಸಾಮಾನ್ಯ ಸಾರಿಗೆ ಗಳಿಂದ 157 ಸುತ್ತುವಳಿಗಳಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಕುಂದಾಪುರ – ಬೋಳಂಬಳ್ಳಿ, ಕುಂದಾಪುರ – ಸಿದ್ಧಾಪುರ, ಕುಂದಾಪುರ – ಬಡಾಕೆರೆ, ಕುಂದಾಪುರ – ಭಟ್ಕಳ, ಕುಂದಾಪುರ – ಅಜ್ರಿ ಕುಂದಾಪುರ – ತೊಂಬಟ್ಟು ಮಾರ್ಗಗಳಿಗೆ ಸುತ್ತುವಳಿ / ಸಮಯ ಪರಿಷ್ಕರಣೆ ಮಾಡಿ ಹೆಚ್ಚುವರಿಯಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ ಎಂದರು. ಅಲ್ಲದೆ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪರ್ಮಿಟ್ ಹೊಂದಿರುವ ಪರವಾನಗಿಗಳಲ್ಲಿ ಕುಂದಾಪುರ – ತೊಂಬಟ್ಟು ವಯಾ ಕೋಟೇಶ್ವರ – ಹುಣಸೆಮಕ್ಕಿ – ಬಿದ್ಕಲ್ ಕಟ್ಟೆ – ಹಾಲಾಡಿ – ಅಮಾಸೆಬೈಲು ಮಾರ್ಗದಲ್ಲಿ ಕಾರ್ಯಾಚರಿಸ ಲಾಗುತ್ತಿದ್ದ ಸಾರಿಗೆ ಯನ್ನು ಸಾರಿಗೆ ಆದಾಯ ಕಡಿಮೆ ಬರುತ್ತಿದ್ದ ಹಿನ್ನಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ವಿದ್ಯಾರ್ಥಿಗಳು /ಸಾರ್ವಜನಿಕರ ಅನುಕೂಲಕ್ಕಾಗಿ ಸದರಿ ಮಾರ್ಗದ ಸಾರಿಗೆಯನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ. ಮುಂದುವೆರೆದು ಕುಂದಾಪುರ – ಕೊಲ್ಲೂರು ವಯಾ ಬಸ್ರೂರು – ಕಂಡ್ಲೂರು – ವಾಲ್ತೂರು- ನೇರಳಕಟ್ಟೆ – ವಂಡ್ಸೆ – ಚಿತ್ತೂರು ಮಾರ್ಗದಲ್ಲಿ ಸಾರಿಗೆ ಗಳನ್ನು ಕಾರ್ಯಾಚರಣೆಗೊಳಿಸಲು ಚಾಲನಾ ಸಿಬ್ಬಂದಿ ಗಳು / ವಾಹಗಳ ಕೊರತೆಯಿಂದ ಸಾಧ್ಯವಾಗಿರುವುದಿಲ್ಲ. ಪ್ರಸ್ತುತ ನಿಗಮದಲ್ಲಿ ಹೊಸ ವಾಹನ ಗಳ ಸೇರ್ಪಡೆ /ಚಾಲನ ಸಿಬ್ಬಂದಿಯ ನೇರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ವಾಹನ / ಸಿಬ್ಬಂದಿ ನಿಗಮಕ್ಕೆ ಸೇರ್ಪಡೆಯಾದ ನಂತರ ಅವಶ್ಯಕತೆಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲು ಹಂತ ಹಂತವಾಗಿ ಕ್ರಮ ವಹಿಸಲಾಗುವುದು ಎಂದರು. ಯಾವ ರೂಟ್ ಗಳಲ್ಲಿ ಬಸ್ ಸೇವೆ ಇಲ್ಲವೋ ಅಲ್ಲಿಗೆ ಆದ್ಯತೆ ಮೆರೆಗೆ ಸರ್ಕಾರಿ ಬಸ್ ಓಡಿಸಬೇಕು. ಲಾಭದಾಯಕ ರೂಟ್ ಗಳಲ್ಲಿ ಮಾತ್ರ ಸಂಚಾರ ಮಾಡುವಂತೆ ಆಗಬಾರದು ಎಂದು ಶಾಸಕರು ತಿಳಿಸಿದರು.