ಬೈಂದೂರು : ಕುಂದಾಪುರ ತಾಲೂಕಿನ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಿದ್ದಾಪುರ ಏತ ನೀರಾವರಿಯನ್ನು ಟರ್ನ್ – ಕೀ ಆಧಾರದ ಮೇಲೆ ಟೆಂಡರ್ ಅಂತಿಮ ಗೊಳಿಸಲಾಗಿದ್ದು, ಗುತ್ತಿಗೆ ಕರಾರು ಮಾಡಿಕೊಂಡು ಕಾಮಗಾರಿ ಅನುಷ್ಠಾನ ಗೊಳಿಸಲಾಗುವುದೆಂದು ಉಪ ಮುಖ್ಯ ಮಂತ್ರಿ ಗಳು ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ. ಕೆ ಶಿವ ಕುಮಾರ್ ರವರು ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ.
ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಚಿವರು ವಾರಾಹಿ ನದಿಯಿಂದ ನೀರನ್ನೆತ್ತಿ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಅಜ್ರಿ, ಕೊಡ್ಲಾಡಿ, ಅಂಪಾರು, ಕರ್ಕುಂಜೆ, ಸಿದ್ದಾಪುರ, ಹಾಗೂ ಇತರೆ ಗ್ರಾಮಗಳ 1200 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ 165.50 ಕೋಟಿ ಅಂದಾಜು ಮೊತ್ತದ ಸಿದ್ಧಾಪುರ ಏತ ನೀರಾವರಿ ಯೋಜನೆಗೆ ಸರಕಾರದ ಆದೇಶ 2022ರ ಸೆಪ್ಟೆಂಬರ್ 6ರಂದು ಆಡಳಿತಾ ತ್ಮಕ ಅನುಮೋದನೆ ನೀಡಲಾಗಿದೆ. ಪ್ರಸ್ತುತ ಟೆಂಡರ್ ಅಂತಿಮಗೊಳಿಸಲಾಗಿದ್ದು, ಗುತ್ತಿಗೆ ಕರಾರು ಮಾಡಿಕೊಂಡು ಕಾಮಗಾರಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದರು.