21. ಆತ್ಮತೃಪ್ತಿ
ಕಾರ್ಯಶ್ರದ್ಧೆಯನ್ನು ಹೊಂದುವುದೆಂದರೆ ಕರ್ಮದಲ್ಲಿ ಕೇವಲ ಆಸಕ್ತಿಯನ್ನು ಹೊಂದುವುದು ಎಂದರ್ಥವಲ್ಲ. ಶ್ರದ್ಧೆಯನು ಶಿಸ್ತಿನ ಚೌಕಟ್ಟಿನೊಳಗೆ ತಂದಾಗ ಹಿಡಿದ ಕಾರ್ಯವನ್ನು ದಕ್ಷತೆಯಿಂದ ನೆರವೇರಿಸುವ ಮನೋಭಾವ ಏರ್ಪಡುತ್ತದೆ. ಈ ಕಾರ್ಯದಕ್ಷತೆಯಿಂದ ಸಿಗುವ ಆತ್ಮತೃಪ್ತಿ ಅನನ್ಯವಾದದ್ದು. ಉದ್ದೇಶಿತ ಕಾರ್ಯವು ಫಲಪ್ರದವಾಗಿ ಕೊನೆಗೊಂಡಾಗ ಸಿಗುವ ಸಂತೋಷಕ್ಕಿಂತಲೂ ಮಿಗಿಲಾದ ಆನಂದ ಆ ಕಾರ್ಯಸಾಧನೆಗೆ ತೊಡಗಿಕೊಂಡ ಹೊತ್ತಿನಲ್ಲಿ ತೋರಿದ ಶಿಸ್ತು, ಸಂಯಮ, ಶ್ರದ್ಧೆಯಿಂದ ಸಿಗುವುದು. ಇದು ಚೀತೋಹಾರಿ ಅನುಭವ. ಈ ಅನುಭವವು ಪ್ರಾಪ್ತವಾಗ ಬೇಕಾದರೆ ಮನಸ್ಸನ್ನು ಖುಶಿ ಬಂದೆಡೆಗೆ ಹರಿಯದಂತೆ ಬಿಗಿ ಹಿಡಿಯುವ ಶಕ್ತಿ ಇರುವುದು ಅಗತ್ಯ. ಎಂದರೆ ಮನಸ್ಸಿನ ಸ್ಥಿರತೆಯನ್ನು ನಿರಂತರವಾಗಿ ಕಾಯ್ದುಕೊಳ್ಳುವುದು ಮುಖ್ಯ. ಮನಸ್ಸನ್ನು ವರ್ತ ಮಾನದಲ್ಲಿ ನೆಲೆಗೊಳಿಸುವ ಮೂಲಕವೇ ಏಕಾಗ್ರತೆ ಮತ್ತು ಸ್ಥಿರತೆ ಪ್ರಾಪ್ತವಾಗುತ್ತದೆ. ಆದರೆ ಮನಸ್ಸು ಅಷ್ಟು ಸುಲಭವಾಗಿ ವರ್ತಮಾನದಲ್ಲಿ ನೆಲೆಗೊಳ್ಳುವುದುಂಟೆ? ಮನಸ್ಸಿಗೆ ಇಷ್ಟವಾದ ಕೆಲಸವೆಂದರೆ ಭೂತಕಾಲದ ಸಂಗತಿಗಳನ್ನು ಮೆಲುಕುಹಾಕುವುದು, ಇಲ್ಲವೇ ನಮಗೆ ಆತ್ಯಾನಂದ ಉಂಟು ಮಾಡಬಲ್ಲ ಸಂಗತಿಗಳನ್ನು ಈಗ ಘಟಿಸುತ್ತಿರುವಂತೆ ಚಿತ್ರಿಸಿಕೊಂಡು ಸಂತೋಷ ಪಡುವುದು! ಯಾವ ಕೆಲಸಕ್ಕೆ ಕೈಹಚ್ಚಿದರೂ ಮನಸ್ಸು ಅಷ್ಟು ಸುಲಭವಾಗಿ ವರ್ತಮಾನದಲ್ಲಿ ನೆಲೆಗೊಳ್ಳದೆ ಭೂತದಿಂದ ಭವಿಷ್ಯಕ್ಕೂ ಭವಿಷ್ಯದಿಂದ ಭೂತಕ್ಕೂ ಜಿಗಿಯುತ್ತಲೇ ಇರುತ್ತದೆ. ಅದಕ್ಕೆ ಹಗಲುಗನಸುಗಳನ್ನು ಕಾಣುವಷ್ಟು ಪ್ರಿಯವಾದದ್ದು ಬೇರೊಂದಿಲ್ಲ.