ಬೆಂಗಳೂರು : ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಟ್ಟು ಬಿಡದ ಹಿನ್ನೆಲೆಯಲ್ಲಿ ವಿಧಾನಮಂಡಲ ದಲ್ಲಿ ಕೋಲಾಹಲ ಸೃಷ್ಟಿಯಾಗಿ ಕೊನೆಗೆ ಉಭಯ ಸದನಗಳ ಕಲಾಪವೇ ಬಲಿಯಾಯಿತು.
ಗುರುವಾರ ಉಭಯ ಸದನಗಳ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರಿಂದ ನಿಗದಿತ ಅವಧಿಗಿಂತ ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಂಡಿತು.ವಾಸ್ತವವಾಗಿ ಶುಕ್ರವಾರ ಕೊನೆಯ ದಿನವಾಗಿತ್ತು.
ಬಿಜೆಪಿ ಮಂಡಿಸಿದ ನಿಲುವಳಿ ಸೂಚನೆ ಎರಡೂ ಸದನಗಳಲ್ಲಿಯೂ ತಿರಸ್ಕರಿಸಲ್ಪಟ್ಟಿದ್ದ ರಿಂದ ಬಿಜೆಪಿ-ಜೆಡಿಎಸ್ ಸದಸ್ಯರು ಉಭಯ ಸದನಗಳಲ್ಲಿ ಬುಧವಾರ ಅಹೋರಾತ್ರಿ ಧರಣಿ ನಡೆಸಿದರು. ಚರ್ಚೆಗೆ ಅವಕಾಶ ನೀಡದಿರುವುದನ್ನು ಖಂಡಿಸಿ ಪ್ರತಿಭಟನೆಯನ್ನು ಎರಡೂ ಸದನಗಳಲ್ಲಿಯೂ ಗುರುವಾರ ಮುಂದುವರಿಸಿದ ಪರಿಣಾಮ ತೀವ್ರ ಗದ್ದಲ ಉಂಟಾಯಿತು. ಪ್ರತಿಪಕ್ಷಗಳು ಪಟ್ಟು ಹಿಡಿದರೂ ಸೊಪ್ಪು ಹಾಕದ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ವಿಧಾನಪರಿಷತ್ತಿನ ಸಭಾಪತಿ ಹೊರಟ್ಟಿ ಅವರು ಚರ್ಚೆಗೆ ಅವಕಾಶ ನೀಡಲಿಲ್ಲ