ಕೋಟ: ಯೋಗವು ಪ್ರತಿಯೊಬ್ಬರ ಜೀವಕ್ಕೂ ಅತ್ಯಗತ್ಯ. ಸುಲಭ ಸಾಧ್ಯವಾದ ಯೋಗವನ್ನು ಮರೆತು ಗುಳಿಗೆಯಿಂದಲೇ ಜೀವನ ನಡೆಸುತ್ತಿರುವುದು ಮಾನವನ ಹೆಡ್ಡತನ. ಆರೋಗ್ಯವಂತರಾಗುವ ಎಲ್ಲಾ ವಿಧಾನಗಳನ್ನು ಮರೆತು ಮಾನವ ಇಂದು ಅವಸಾನದತ್ತ ಮುಂದಡಿಯಿಡುತ್ತಿರುವುದು ನಿಜಕ್ಕೂ ಖೇದಕರ ವಿಷಯ. ಜಗತ್ತೇ ಯೋಗದಲ್ಲಿ ಭಾಗಿಯಾಗಬೇಕೆಂದು ಪ್ರಧಾನಿಯವರೇ ಯೋಗವನ್ನು ನಿರಂತರವಾಗಿ ಮಾಡುವಂತೆ ಕೆಲವು ಅಭಿಯಾನದ ಮೂಲಕ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಜನ ಸಾಮಾನ್ಯರು ತಕ್ಕ ಸ್ಪಂದನೆ ನೀಡದಿರುವುದು ಬೇಸರದ ವಿಷಯ ಎಂದು ರೋಟರಿ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನ್ನಾಡಿದರು. ತೆಕ್ಕಟ್ಟೆ ಹಯಗ್ರೀವದಲ್ಲಿ ಜುಲೈ 28ರಂದು 11 ದಿನಗಳ ಯೋಗ ಶಿಬಿರ ಸಮಾರೋಪವು ರೋಟರಿ ಕ್ಲಬ್ ತೆಕ್ಕಟ್ಟೆ ಸಹಕಾರದಲ್ಲಿ ಸಂಪನ್ನಗೊAಡಿತು. ಯೋಗ ಶಿಬಿರವನ್ನು ಮಧುಸೂಧನ್ ಪೈ ನೆರವೇರಿಸಿಕೊಟ್ಟರು. ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಹಕಾರದೊಂದಿಗೆ ಉದ್ಘಾಟನೆಗೊಂಡ ಶಿಬಿರದ ಸಮಾರೋಪದಲ್ಲಿ ರೋಟರಿ ಕ್ಲಬ್ ತೆಕ್ಕಟ್ಟೆ ಕಾರ್ಯದರ್ಶಿ ಕೃಷ್ಣ ಮೊಗವೀರ, ಚಂದ್ರ, ರೋಟರಿಯ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಪ್ರಾಸ್ತಾವಿಕ ಮಾತನ್ನಾಡಿದರು. ಪ್ರಭಾವತಿ, ವಿಜಯ್ ಯೋಗ ಶಿಬಿರದ ಅನುಭವವನ್ನು ಹಂಚಿಕೊAಡರು.