ಬೆಂಗಳೂರು : ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿರುವಾಗಲೇ ಕೇಂದ್ರದ ಭಾರಿ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಮೂಗಿನಲ್ಲಿ ರಕ್ತಸ್ರಾವ ಆದ ಘಟನೆ ಭಾನುವಾರ ನಡೆದಿದೆ. ಕೂಡಲೇ ಅವರನ್ನು ಜಯನಗರ ಅಪೊಲೋ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.
ಹೃದ್ರೋಗಿಯಾಗಿರುವುದರಿಂದ ಕುಮಾರಸ್ವಾಮಿ ಅವರು ತೆಗೆದುಕೊಳ್ಳುತ್ತಿರುವ ಬ್ಲಡ್ ಥಿನ್ನರ್ ಮಾತ್ರೆಗಳಿಂದ ರಕ್ತಸ್ರಾವ ಆಗಿದೆ. ಉಳಿದಂತೆ ಅವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಆತಂಕಪಡುವ ಅಗತ್ಯವೇ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಮುಡಾ ಅಕ್ರಮ ಕುರಿತು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಕೈಗೊಳ್ಳುವ ಕುರಿತಂತೆ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಮನ್ವಯ ಸಭೆ ಬಳಿಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ ಅವರು, ‘ಈ ಸರ್ಕಾರ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದೆ. ಭಂಡ ಧೈರ್ಯದಿಂದ ಅಕ್ರಮ ನಡೆಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮೂಗಲ್ಲಿ ರಕ್ತಸ್ರಾವದ ಅನುಭವವಾಗಿ ಕೈನಲ್ಲಿ ಮೂಗು ಮುಟ್ಟಿಕೊಂಡಾಗ ಕೈಗೆ ರಕ್ತ ಅಂಟಿದೆ. ತಕ್ಷಣ ಕುಮಾರಸ್ವಾಮಿ ಅವರು ಮೂಗಿನಲ್ಲಿ ರಕ್ತ ಬರುತ್ತಿದೆ ಎಂದು ಹೇಳಿ ಸಹಾಯಕರಿಂದ ಟವಲ್ ಪಡೆದು ಅಡ್ಡ ಇಟ್ಟುಕೊಂಡರೂ ರಕ್ತಸ್ರಾವ ನಿಲ್ಲಲಿಲ್ಲ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು