ನವದೆಹಲಿ : ಮುಡಾ ಹಗರಣ ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರುವರೆಗೆ ಆ.3ರಿಂದ ಬಿಜೆಪಿ ನಡೆಸಲುದ್ದೇಶಿಸಿರುವ ಪಾದಯಾತ್ರೆಯಿಂದ ಮಿತ್ರ ಪಕ್ಷವಾದ ಜೆಡಿಎಸ್ ದೂರವುಳಿಯುವುದಷ್ಟೇ ಅಲ್ಲ, ನೈತಿಕ ಬೆಂಬಲವನ್ನೂ ನೀಡುವುದಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಪಾದಯಾತ್ರೆಗೆ ಸಂಬಂಧಿಸಿ ಮಿತ್ರಪಕ್ಷವಾದ ನಮ್ಮನ್ನು ವಿಶ್ವಾಸಕ್ಕೂ ತೆಗೆದುಕೊಂಡಿಲ್ಲ. ಜತೆಗೆ ರಾಜ್ಯದಲ್ಲಿ ಮಳೆ, ನೆರೆ, ಭೂಕುಸಿತ ಆಗುತ್ತಿರುವ ಈ ಸಂದರ್ಭದಲ್ಲಿ ಇಂಥ ಹೋರಾಟ ಸೂಕ್ತವೂ ಅಲ್ಲ ಎಂದಿರುವ ಅವರು, ದೇವೇಗೌಡರ ಕುಟುಂಬಕ್ಕೆ ವಿಷ ವಿಕ್ಕಿದ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಳ್ಳಲು ಸಾಧ್ಯವೇ ? ಎಂದು ಪ್ರೀತಂಗೌಡ ಅವರ ಉಪಸ್ಥಿತಿ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ವಿರೋಧಿಸಿ ಪಾದಯಾತ್ರೆ ಮಾಡುವ ಬದಲು ಕಾನೂನು ಹೋರಾಟ ಮಾಡಬೇಕು. ಇದರಲ್ಲಿ ನಮಗೆ ರಾಜಕೀಯ ಮಾಡುವ ಉದ್ದೇಶ ವಿಲ್ಲ, ಬಿಜೆಪಿ ಪಾದಯಾತ್ರೆಗೆ ನಾವು ನೈತಿಕ ಬೆಂಬಲವನ್ನೂ ನೀಡುವುದಿಲ್ಲ. ಬಿಜೆಪಿ ನಾಯಕರು ಪಾದಯಾತ್ರೆಗೆ ಸಿದ್ಧತೆ ಮಾಡಿಕೊಂಡ ನಂತರ ನಮಗೂ ಮಾಹಿತಿ ಇರಲಿ ಎಂದು ಹೇಳಿದ್ದಾರಷ್ಟೆ. ಬೆಂಗಳೂರಿನಿಂದ ಮೈಸೂರುವರೆಗೂ ಶಕ್ತಿ ಇರುವ ನಮ್ಮನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಬೆಂಬಲ ಯಾಕೆ ಕೊಡಬೇಕು? ಈ ವಿಚಾರದಲ್ಲಿ ನನ್ನ ಮನಸ್ಸಿಗೆ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.