ಬೆಳಗಾವಿ : ಭಾರತದ ಪರಂಪರೆಯನ್ನು ಶ್ರೀಮಂತಗೊಳಿಸುವುದರ ಜತೆಗೆ ಆ ಪರಂಪರೆಯನ್ನು ವಿಶ್ವಕ್ಕೆ ಸಾರಬೇಕಿದೆ. ನಾವು ನಡೆಯುವ ಮಾರ್ಗಗಳು ಬೇರೆ ಬೇರೆಯಾಗಿದ್ದರೂ ಕೂಡ ನಮ್ಮೆಲ್ಲರ ಗುರಿ ಒಂದೇ ಆಗಿದೆ. ಹೀಗಾಗಿ, ಚಿಂತನ-ಮಂಥನಗಳೊಂದಿಗೆ ಎಲ್ಲರೂ ಒಂದಾಗಿ ಸಾಗಬೇಕಾದ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು.
ಇಲ್ಲಿನ ಹಿಂದವಾಡಿಯ ಕೆಎಲ್ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ (ಗುರುದೇವ ರಾನಡೆ ಮಂದಿರದ) ಅಕಾಡೆಮಿ ಆಪ್ ಕಂಪ್ಯಾರೇಟಿವ್ ರಿಲಿಜನ್ನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕಾರ, ಸದ್ಗುಣ, ಉಪಾಸನೆಗಳ ಮೂಲಕ ಸನ್ಮಾರ್ಗದಲ್ಲಿ ನಡೆದು ನಮ್ಮನ್ನು ನಾವು ಪರಿವರ್ತನೆಗೊಳಿಸುತ್ತಾ, ಮೋಕ್ಷ ಪ್ರಾಪ್ತಿಗಾಗಿ, ಗುರಿಯೆಡೆಗೆ ಮುನ್ನಡೆಯಬೇಕೆಂದರು. ಚಿಂತನೆಗಳು ಬೇರೆ ಬೇರೆ ಇರಬಹುದು. ಸಾಗುವ ಮಾರ್ಗಗಳು ಬೇರೆಯಾಗಿದ್ದರೂ, ಆಚರಣೆಗಳೂ ಕೂಡ ಬೇರೆಯಿದ್ದರೂ ಕೊನೆಗೆ ಸೇರುವ ಗುರಿ ಒಂದೇ ಆಗಿದೆ. ಎಲ್ಲ ಧರ್ಮಗಳ ಸಾರವೂ ಇದೇ ಆಗಿದೆ. ನಾವು ಉತ್ತಮವಾದ ಮಾರ್ಗದಲ್ಲಿ ಸಾಗಿದರೆ ಇನ್ನೊಬ್ಬರಿಗೆ ಸನ್ಮಾರ್ಗ ತೋರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಾಧನೆ ಸಿದ್ದಿಗಾಗಿ ಅನುಭೂತಿಯ ಜತೆಗೆ ತತ್ವಜ್ಞಾನವೂ ಬೇಕೆಂಬುದನ್ನು ಅನಾದಿಕಾಲದಿಂದಲೂ ನೋಡುತ್ತಿದ್ದೇವೆ ಮತ್ತು ಅದು ಸತ್ಯವೂ ಹೌದು ಎಂದರು