ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಹಗರಣಗಳ ತಾರ್ಕಿಕ ಅಂತ್ಯಕ್ಕೆ ಪಣ ತೊಟ್ಟಿರುವ ಬಿಜೆಪಿ ಮತ್ತು ಜೆಡಿಎಸ್ ಶನಿವಾರದಿಂದ ಹೋರಾಟವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲಿವೆ. ಉಭಯ ಪಕ್ಷಗಳು ಜಂಟಿಯಾಗಿ ನಡೆಸುವ ಮೈಸೂರು ಚಲೋ ಪಾದಯಾತ್ರೆಗೆ ಇಂದುಬೆಳಗ್ಗೆ 8.30ಕ್ಕೆ ಚಾಲನೆ ಸಿಗಲಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ಕೊಡುತ್ತಾರೆ. ಕೆಂಗೇರಿ ಕೆಂಪಮ್ಮ ದೇವಸ್ಥಾನದ ಬಳಿ ಯಿಂದ ಪಾದಯಾತ್ರೆ ಆರಂಭವಾಗಿ ಆ.10ರಂದು ಮೈಸೂರು ಮುಡಾದಲ್ಲಿ ಮುಕ್ತಾಯವಾಗಲಿದೆ. ಎಂಟು ದಿನಗಳ ಪಾದಯಾತ್ರೆ ಇದಾಗಿದ್ದು, ಮೈಸೂರಿನಲ್ಲಿ ಸಮಾರೋಪ ನಡೆಯಲಿದೆ ಎಂದರು. ಪಾದಯಾತ್ರೆಯಲ್ಲಿ ಪ್ರತಿದಿನ ಕನಿಷ್ಠ 8 ರಿಂದ 10 ಸಾವಿರ ಜನರು ಪಾಲ್ಗೊಳ್ಳುತ್ತಾರೆ. ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕರ್ತರು ಬರಲಿದ್ದಾರೆ. ಎಲ್ಲರೂ ಉತ್ಸಾಹದಿಂದ ಭಾಗವಹಿಸುತ್ತಾರೆ. ಇದರ ರೂಟ್ ಮ್ಯಾಪ್ ಸಿದ್ದಗೊಂಡಿದೆ ಎಂದು ವಿವರ ನೀಡಿದರು. ಭ್ರಷ್ಟ ಕಾಂಗ್ರೆಸ್ ಹಾಗೂ ಹಗರಣಗಳ ಸರ್ಕಾರ ರಾಜ್ಯದಲ್ಲಿದೆ. ಇದು ಬಡವರ ವಿರೋಧಿ, ಪರಿಶಿಷ್ಟ ಸಮುದಾಯಗಳ ವಿರೋಧಿ ಸರ್ಕಾರ ಎಂದು ಅವರು ಕಿಡಿಕಾರಿದರು