ಉಡುಪಿ : ಕೆಸರು ಗದ್ದೆ ನಮ್ಮ ಮಣ್ಣಿನ ರೈತರ ಬದುಕಿನ ಸಂಕೇತ. ಕೆಸರು ಗದ್ದೆ ಕ್ರೀಡಾ ಕೂಟದಿಂದ ಗ್ರಾಮೀಣ ಸೊಡಗು, ಸಂಸ್ಕೃತಿ ಮತ್ತು ಭವ್ಯ ಪರಂಪರೆಯ ಅನಾವರಣ ಸಾಧ್ಯ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.
ಅವರು ಯುವಕ ಮಂಡಲ(ರಿ.) ಹಿರಿಯರ ವೇದಿಕೆ ಅಂಬಲಪಾಡಿ ಇದರ ಆಶ್ರಯದಲ್ಲಿ ಪರಿಸರದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಯುವಕ ಮಂಡಲ(ರಿ.) ಹಿರಿಯರ ವೇದಿಕೆ ಅಧ್ಯಕ್ಷ ಹರೀಶ್ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಅಂಬಲಪಾಡಿ ಬೀಡು ಮಾರ್ಗ ಸೀತಾರಾಮ ಶೆಟ್ಟಿಯವರ ಗದ್ದೆಯಲ್ಲಿ ನಡೆದ ಕೆಸರು ಗದ್ದೆ ಕ್ರೀಡಾ ಕೂಟ ‘ಕೆಸರ್ದ ಗೊಬ್ಬು’ ಕಾರ್ಯಕ್ರಮವನ್ನು ತೆಂಗಿನ ತೆನೆ ಅರಳಿಸಿ, ಕಳಸಕ್ಕೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಸಂಸ್ಕೃತಿಯಲ್ಲಿ ಮಣ್ಣಿಗೆ ಬಹಳಷ್ಟು ಮಹತ್ವವಿದೆ. ಮನುಷ್ಯನಿಗೂ ಮಣ್ಣಿಗೂ ಅವಿನಾಭಾವ ಸಂಬಂಧ. ಪಂಚಭೂತಗಳಲ್ಲಿ ಮಣ್ಣು ಒಂದು ವಿಶಿಷ್ಟವಾದ ಅಂಶ. ‘ಮಣ್ಣಿನಿಂದ ದೇಹ, ದೇಹದಿಂದ ಮಣ್ಣಿಗೆ’ ಎಂದು ಪುರಂದರ ದಾಸರು ಹೇಳಿದ್ದಾರೆ. ನಾವು ಅಷ್ಟು ಮಣ್ಣಿನೊಂದಿಗೆ ಹೊಂದಿಕೊಂಡವರು, ಅಲ್ಲೇ ಹುಟ್ಟಿ ಅಲ್ಲಿಗೇ ಸೇರುವವರು. ಗ್ರಾಮೀಣ ಪ್ರದೇಶ ಕೃಷಿ ಪ್ರಧಾನವಾದ ಪ್ರಾಂತ್ಯ. ಕೃಷಿಗೆ ಮಣ್ಣು ಅತೀ ಮುಖ್ಯ. ಇದಕ್ಕೆ ದೊಡ್ಡ ಇತಿಹಾಸವೇ ಇದೆ. ಮಣ್ಣು ತುಂಬಾ ಫಲವತ್ತಾಗಿರುತ್ತದೆ. ಉಸಿರಾಟಕ್ಕೆ ಆಮ್ಲಜನಕ ಕೊಡುವ ಮರ ಗಿಡ ಸಸ್ಯಗಳಿಗೆ ಮಣ್ಣು ಬೇಕು. ಕೆಸರಿನಲ್ಲಿ ನಿರ್ಮಲವಾಗಿ ಅರಳುವ ತಾವರೆಯಂತೆ ನಾವು ಬದುಕಬೇಕು ಎಂದರು
ಕೆಸರಿನಲ್ಲಿ ಓಡಾಡಲು ಅಭ್ಯಾಸ ಬೇಕು. ಹಿಂದೆ ಅಂಬಲಪಾಡಿಯಲ್ಲೂ ಕಂಬಳ ನಡೆಯುತ್ತಿತ್ತು. ಇಂದು ಮನುಷ್ಯರ ಕಂಬಳ ಬೀಡಿನ ಬಳಿಯೇ ನಡೆಯುತ್ತಿರುವುದು ಸಂತಸ ತಂದಿದೆ. ಕೆಸರಿನಲ್ಲಿ ಆಟವಾಡಿದವರಿಗೆ ಯಾವುದೇ ಶೀತ, ನೆಗಡಿ, ಜ್ವರ ಬರುವುದಿಲ್ಲ. ಕೆಸರಿನಲ್ಲಿ ರೋಗ ನಿರೋಧಕ ಶಕ್ತಿ ಇದೆ. ಶ್ರಮದ ಬದುಕಿನ ಸಂಕೇತದ ಜೊತೆಗೆ ದೇಹದಾಡ್ಯತೆ, ಮನೋವಿಕಾಸ, ಆರೋಗ್ಯ ವೃದ್ಧಿಯ ಸಹಿತ ಎಲ್ಲರೂ ಆತ್ಮೀಯರಾಗಿ ಒಂದಾಗುವ ಅವಿಸ್ಮರಣೀಯ ಕ್ಷಣ ಈ ‘ಕೆಸರ್ದ ಗೊಬ್ಬು’ ಎಂದರು.
ಗ್ರಾಮೀಣ ಬದುಕಿನ ಆಚಾರ-ವಿಚಾರ, ಪರಂಪರೆಯನ್ನು ಪರಿಚಯಿಸುವ ಈ ಕೆಸರು ಗದ್ದೆ ಆಟೋಟ ಸ್ಪರ್ಧೆಗೆ ಮಕ್ಕಳು, ಯುವಕರು, ಮಹಿಳೆಯರು ಸೇರಿರುವುದು ಉತ್ತಮ ಬೆಳವಣಿಗೆ. ಯುವಕ ಮಂಡಲ ಹಿರಿಯರ ವೇದಿಕೆ(ರಿ.) ಇತರ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಸೇರಿ ‘ಕೆಸರ್ದ ಗೊಬ್ಬು’ ಎಂಬ ಉತ್ತಮ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಮತ್ತು ಅಭಿನಂದನೀಯ. ಎಲ್ಲರೂ ಒಂದಾಗಿ ಒಳ್ಳೆಯ ಮನೋಭಾವ ಮತ್ತು ಸಹಕಾರದೊಂದಿಗೆ ಆಟವಾಡುವ ಮೂಲಕ ‘ಅಂಬಲಪಾಡಿ ಒಂದು’ ಎಂದು ಬದುಕುವಂತಹ ಉದಾತ್ತ ಸಂದೇಶಕ್ಕೆ ನಾಂದಿ ಹಾಡಿದಂತಾಗಿದೆ. ಇಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮ ಎಲ್ಲೆಡೆ ಪಸರಿಸಲಿ. ಆರೋಗ್ಯ ಮತ್ತು ಒಗ್ಗಟ್ಟು ಅತೀ ಮುಖ್ಯ ಎಂಬ ಭಾವನೆ ಜಾಗೃತಿಗೊಳ್ಳಲಿ ಎಂದು ಡಾ! ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.
ಅಂಬಲಪಾಡಿ ಶ್ರೀ ವಿಠೋಬ ಭಜನಾ ಮಂದಿರ, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಆಷಾಢ ಮಾಸದ ಕಷ್ಟದ ಬದುಕು ಮತ್ತು ಆಚರಣೆಗಳ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಸರ್ದ ಗೊಬ್ಬು ಕಾರ್ಯಕ್ರಮ ಸಕಾಲಿಕ ಮತ್ತು ಪ್ರಶಂಸನೀಯ ಎಂದರು.
ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯ ಸೋಮನಾಥ್ ಬಿ.ಕೆ. ಮಾತನಾಡಿ ಉತ್ತಮ ಚಟುವಟಿಕೆಗಳನ್ನು ನಡೆಸುತ್ತಿರುವ ಯುವಕ ಮಂಡಲ ಹಿರಿಯರ ವೇದಿಕೆ ಪರಿಸರದ ವಿವಿಧ ಸಂಘ-ಸಂಸ್ಥೆಗಳನ್ನು ಒಗ್ಗೂಡಿಸಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಅನುಕರಣೀಯ ಎಂದರು. ಉದ್ಯಮಿ ವಿಶ್ವನಾಥ್ ಹೆಗ್ದೆ ಮಾತನಾಡಿ ಯುವಕ ಮಂಡಲ ಹಿರಿಯರ ವೇದಿಕೆಯ ನೇತೃತ್ವದಲ್ಲಿ ಶ್ರೀ ದೇವಳದ ಸಹಕಾರ ಹಾಗೂ ಎಲ್ಲ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಇಂತಹ ಕೆಸರು ಗದ್ದೆ ಕ್ರೀಡಾ ಕೂಟ ಪ್ರತೀ ವರ್ಷ ನಡೆಯುವಂತಾಗಲಿ ಎಂದರು. ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಅವರು ಕೆಸರು ಗದ್ದೆಗೆ ಹಾಲೆರೆದು, ಗದ್ದೆಯಲ್ಲಿದ್ದ ಮಕ್ಕಳತ್ತ ಬಾಲ್ ಎಸೆಯುವ ಮೂಲಕ ಕೆಸರು ಗದ್ದೆಯ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಶೆಟ್ಟಿ, ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಯುವಕ ಮಂಡಲ ಹಿರಿಯರ ವೇದಿಕೆಯ ಗೌರವಾಧ್ಯಕ್ಷ ಕೀರ್ತಿ ಶೆಟ್ಟಿ, ಗದ್ದೆಯ ಮಾಲಕ ಸೀತಾರಾಮ ಶೆಟ್ಟಿ, ಅಂಬಲಪಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂದಿರದ ಅಧ್ಯಕ್ಷ ಭರತ್ ರಾಜ್ ಕೆ.ಎನ್., ವಿಶ್ವಕರ್ಮ ಸಂಘ ಅಂಬಲಪಾಡಿ ಅಧ್ಯಕ್ಷ ಜಗದೀಶ್ ಆಚಾರ್ಯ ಕಪ್ಪೆಟ್ಟು, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಭಾರತಿ ಭಾಸ್ಕರ್, ಲಕ್ಷ್ಮಣ ಪೂಜಾರಿ, ಕುಸುಮ ಕಿಶೋರ್, ಹರೀಶ್ ಪಾಲನ್, ಸುನೀಲ್ ಕುಮಾರ್ ಕಪ್ಪೆಟ್ಟು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರಾದ ಪ್ರದೀಪ್ ಶೆಟ್ಟಿ, ಮೋಹನ ಬಲ್ಲಾಳ್, ನವೀನ್ ಸುವರ್ಣ, ಜಗನ್ನಾಥ್ ಕಪ್ಪೆಟ್ಟು, ಪ್ರಕಾಶ್ ಆಚಾರ್ಯ, ಸವಿತಾ ಸಂತೋಷ್, ಗೀತಾ ಪಾಲನ್, ವಿಲಾಸಿನಿ ಆಚಾರ್ಯ ಹಾಗೂ ಯುವಕ ಮಂಡಲದ ಹಿರಿಯರ ವೇದಿಕೆ ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸ್ಪರ್ಧಾಳುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ಧರ್ಮದರ್ಶಿಗಳಿಂದ ಹಣ್ಣು ಕಾಯಿ ಪ್ರಸಾದ ಸ್ವೀಕರಿಸಿ, ಅವರನ್ನು ಅಂಬಲಪಾಡಿ ಬೀಡು ಮನೆಯಿಂದ ಬ್ಯಾಂಡ್ ಸಹಿತ ಮೆರವಣಿಗೆಯಲ್ಲಿ ಕೆಸರು ಗದ್ದೆಯ ಬಳಿ ಕರೆತರಲಾಯಿತು. ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಯೋಗೀಶ್ ಕೊಳಲಗಿರಿ, ಪ್ರಶಾಂತ್ ಕೆ.ಎಸ್. ಮತ್ತು ಅಜಿತ್ ಕಪ್ಪೆಟ್ಟು ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲ(ರಿ.) ಹಿರಿಯರ ವೇದಿಕೆ ಅಂಬಲಪಾಡಿ ಉಪಾಧ್ಯಕ್ಷ ನಾಚಿಕೇತ್ ಶೆಟ್ಟಿಗಾರ್ ವಂದಿಸಿದರು.