ಕೋಟ : ಇಲ್ಲಿನ ಬ್ರಹ್ಮಾವರ ತಾಲೂಕಿನ ಮಣೂರು, ಗಿಳಿಯಾರು, ಚಿತ್ರಪಾಡಿ, ಬನ್ನಾಡಿ, ಕಾರ್ಕಡ ಗ್ರಾಮದ ಕೃತಕ ನೆರೆ ಸಂತ್ರಸ್ತ ರೈತರ ಐತಿಹಾಸಿಕ ಬೃಹತ್ ಉಪವಾಸ ಸತ್ಯಾಗ್ರಹ ಹಾಗೂ ಹಕ್ಕೊತ್ತಾಯಗಳ ಕರಪತ್ರ ಬಿಡುಗಡೆ ಕಾರ್ಯಕ್ರಮವು ಆ.3 ರಂದು ಶನಿವಾರ ಬೆಳಿಗ್ಗೆ ಶ್ರೀ ಹಿರೇಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೋಟದ ರೈತ ಧ್ವನಿ ಅಧ್ಯಕ್ಷ ಜಯರಾಮ್ ಶೆಟ್ಟಿ ಮಣೂರು ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ ಕಳೆದ ಸಾಕಷ್ಟು ವರ್ಷಗಳಿಂದ ತೆಕ್ಕಟ್ಟೆ ಯಿಂದ ಕಾರ್ಕಡದ ವರೆಗೆ ಕೃತಕ ನೆರೆಯಿಂದಾಗಿ ರೈತ ಬೆಳೆದ ಬೆಳೆ ಕೊಳೆತು ಭಸ್ಮವಾಗಿದೆ.ಎಷ್ಟು ಬಾರಿ ಮನವಿ ನೀಡಿದರೂ ಪ್ರಯೋಜನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತ್ತಾಗಿದೆ. ಈ ಹಿಂದೆ ಹಲವು ಬಾರಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಒತ್ತಡ ಹೇರಿದ್ದೇವೆ ಆದರೆ ಆ ಪ್ರಯತ್ನ ಪ್ರಯತ್ನವಾಗಿಯೇ ಉಳಿದುಕೊಂಡಿದೆ ಈ ಹಿನ್ನಲ್ಲೆಯಲ್ಲಿ ಆ. 7 ರಂದು ಬುಧವಾರ ಬೆಳಿಗ್ಗೆ ಕೋಟ ಶ್ರೀ ಹಿರೇಮಹಾಲಿಂಗೇಶ್ವರ ದೇವಾಲಯ ಜಾತ್ರಾ ಮೈದಾನದಲ್ಲಿ ಸಾವಿರಾರು ರೈತರು ಸೇರಿ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹವನ್ನು ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಈ ಮನವಿಗೆ ಸ್ಪಂದಿಸಿ, ಸ್ಥಳೀಯಾಡಳಿತವಾಗಲಿ, ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಸಹಕಾರ ಮಾಡಿ ರೈತಕೂಗನ್ನು ಆಲಿಸಿ ಕೃಷಿಯನ್ನು ಮಾಡಲು ಅವಕಾಶ ಮಾಡಿಕೊಟ್ಟಲ್ಲಿ ನಾವು ಸ್ವಾಗತಿಸುತ್ತೇವೆ. ಒಂದು ವೇಳೆ ಇದು ಫಲಿಸದಿದ್ದರೆ ಮುಂದೆ ಉಗ್ರ ಹೋರಾಟವನ್ನು ಮಾಡಲಿದ್ದೇವೆ ಎಂದು ಅಧ್ಯಕ್ಷ ಜಯರಾಮ್ ಶೆಟ್ಟಿ ಎಚ್ಚರಿಸಿದರು.
ಸಂದರ್ಭದಲ್ಲಿ ನ್ಯಾಯವಾದಿ ಟಿ ಮಂಜುನಾಥ್ ಗಿಳಿಯಾರು,ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ, ರೈತ ಮುಖಂಡರಾದ ಸುಭಾಸ್ ಶೆಟ್ಟಿ, ಬೋಜ ಪೂಜಾರಿ ಗಿಳಿಯಾರು, ಹಂಡಿಕೆರೆ ರಾಘವೇಂದ್ರ ಶೆಟ್ಟಿ, ಸಿದ್ದ ದೇವಾಡಿಗ ಹರ್ತಟ್ಟು, ಚಂದ್ರ ಹಾಡಿಕೆರೆ, ತಿಮ್ಮ ಕಾಂಚನ್ ಹರ್ತಟ್ಟು, ನಿತ್ಯಾನಂದ ಶೆಟ್ಟಿ ಹರ್ತಟ್ಟು, ರಮೇಶ್ ಮೆಂಡನ್ ಸಾಲಿಗ್ರಾಮ, ಮಹಾಬಲ ಪೂಜಾರಿ ಹರ್ತಟ್ಟು, ಮಹೇಶ್ ಶೆಟ್ಟಿ ದ್ಯಾವಸ, ಗಿರೀಶ್ ದೇವಾಡಿಗ ಹರ್ತಟ್ಟು, ಗಿರೀಶ್ ನಾಯಕ್ ಕೋಟ, ಭಾಸ್ಕರ್ ಶೆಟ್ಟಿ ಮಣೂರು ಪಡುಕರೆ, ಸುರೇಶ್ ಪೂಜಾರಿ ಗಿಳಿಯಾರು,ಮಹೇಶ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೀರ್ತಿಶ್ ಪೂಜಾರಿ ಕೋಟ ಸ್ವಾಗತಿಸಿ, ವಂದಿಸಿದರು.