ಮೈಸೂರು : ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ತಲೆದಂಡಕ್ಕೆ ಆಗ್ರಹಿಸಿ ‘ಮೈಸೂರು ಚಲೋ’ ನಡೆಸುತ್ತಿರುವ ದೋಸ್ತಿ ಪಕ್ಷಗಳಿಗೆ ಮೈಸೂರು ಜನಾಂದೋಲನ ಸಮಾವೇಶದಲ್ಲಿ ವಿರಾಟ ಶಕ್ತಿ ಪ್ರದರ್ಶನದ ಮೂಲಕ ಭರ್ಜರಿ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕತ್ವ, ಸಿದ್ದರಾಮಯ್ಯ ಬೆನ್ನ ಹಿಂದೆ ಇಡೀ ಪಕ್ಷ ಒಗ್ಗಟ್ಟಾಗಿ ನಿಂತಿದೆ ಹಾಗೂ ಜನಾಭಿಪ್ರಾಯವೂ ಮುಖ್ಯಮಂತ್ರಿ ಪರವಿದೆ ಎಂಬ ಸಂದೇಶ ರವಾನಿಸಲು ಯತ್ನಿಸಿತು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಗ್ಗಟ್ಟಿನ ರಣಕಹಳೆ ಮೊಳಗಿಸಿ, ಬಿಜೆಪಿ-ಜೆಡಿಎಸ್ ಎಷ್ಟೇ ಷಡ್ಯಂತ್ರ ಮಾಡಿದರೂ ಸಿದ್ದರಾಮಯ್ಯ ನೇತೃತ್ವದ ಸರ್ಕಾ ರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದರು
ನಾಲ್ಕೂವರೆ ದಶಕಗಳ ರಾಜಕೀಯ ಜೀವನದಲ್ಲಿ ನಾನುತಪ್ಪು ಮಾಡಿಲ್ಲ,ಮುಂದೆಯೂ ಮಾಡೋ ದಿಲ್ಲ’ ಎಂದು ಶಪಥಗೈದ ಸಿದ್ದರಾಮಯ್ಯ, ‘ನನ್ನ ಪರ ಯೋಧರಂತೆ ಹೋರಾಡಿ. ನೀವು ಇರುವವರೆಗೂ ನನ್ನನ್ನು ಯಾರೂ ಅಲುಗಾಡಿಸಲಾಗದು’ ಎಂದು ನೆರೆದಿದ್ದ ಅಭಿಮಾನಿ ಸಾಗರಕ್ಕೆ ಕರೆ ನೀಡಿದರು.
ಕಳೆದ ಒಂದು ತಿಂಗಳಿಂದ ತುಸು ಕುಗ್ಗಿದಂತೆ ಕಂಡಿದ್ದ ಸಿದ್ದರಾಮಯ್ಯ, ಸಮಾವೇಶದ ವೇಳೆ ಮೇರೆ ಮೀರಿದ ಕಾಂಗ್ರೆಸ್ ಬೆಂಬಲಿಗರ ಅಮಿತೋತ್ಸಾಹ ಕಂಡು ಹಿಗ್ಗಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ನಿಮ್ಮ ಬೆಂಬಲ ಇದ್ದರೆ ಬಿಜೆಪಿ-ಜೆಡಿಎಸ್ ಎಷ್ಟೇ ಕಪಟ ಯಾತ್ರೆ ನಡೆಸಿದರೂ ನಾನು ಎದುರಿಸುತ್ತೇನೆ. ನಿಮ್ಮ ಆಶೀರ್ವಾದ ನಿರಂತರವಾಗಿರಲಿ. ನನ್ನ ಪರ ಹೋರಾಟ ಮಾಡುತ್ತೀರಿ ಅಲ್ವಾ?’ ಎಂದು ಜನಸಾಗರವನ್ನು ಪ್ರಶ್ನಿಸಿದರು.
‘ನಾನು ನಾಲ್ಕು ದಶಕಗಳಿಂದ ರಾಜಕೀಯದ ಮುಂಚೂಣಿಯಲ್ಲಿದ್ದೇನೆ. ಎರಡೆರಡು ಬಾರಿ ಸಿಎಂ, ಡಿಸಿಎಂ ಪದವಿ ಅಲಂಕರಿಸಿ ಹದಿನೈದು ಬಜೆಟ್ ಮಂಡಿಸಿದ್ದೇನೆ. ನಾನು ಆಶಿಸಿದ್ದರೆ ನೂರಾರು ಕೋಟಿ ಮಾಡಬಹುದಿತ್ತು. ಆದರೆ, ನನಗೆ ಆಸ್ತಿ ಮಾಡುವ ಆಸೆ ಇಲ್ಲ. ಮೈಸೂರಿನಲ್ಲಿ ಈಗ ಕಟ್ಟುತ್ತಿರುವ ಮನೆ ಬಿಟ್ಟು ಒಂದು ನಿವೇಶನ ತೋರಿಸಿ’ ಎಂದು ಸವಾಲು ಹಾಕಿದರು.