ಬೈಂದೂರು : ಬಿಡದೆ ಸುರಿಯುವ ಜಡಿಮಳೆಯಲ್ಲೂ, ತಡೆಯದೇ ಬೀಸುವ ಬಿರುಗಾಳಿಯಲ್ಲೂ ಸಿಡಿದೇಳುವ ಅಲೆಗಳ ನಡುವಲ್ಲೂ ಒಡಲ ತುತ್ತಿನ ಚೀಲ ತುಂಬಲು ಕಡಲಿಗಿಳಿಯುವ ಮೀನುಗಾರು ಒಂದರ್ಥಲ್ಲಿ ನಿಜವಾದ ಹೋರಾಟಗಾರರು. ಗಾಳಿ, ಮಳೆ, ಬಿಸಿಲು ಲೆಕ್ಕಿಸದೇ ತಮ್ಮಯ ಕಾಯಕ, ದುಡಿಮೆಯ ನಂಬಿ ನಡೆವ ವೀರರು. ಈ ಮಳೆಗಾಲದ ಋತುವಿನ ಮೀನುಗಾರಿಕೆ ಆರಂಭವಾಗಿದ್ದು ಸಮಸ್ತ ಮೀನುಗಾರರಿಗೆ ಶುಭವಾಗಲಿ, ಉತ್ತಮ ಮೀನು ಇಳುವರಿ ಪಡೆಯುವ ಮೂಲಕ ಅವರ ಬದುಕು ಹಸನಾಗಲಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಶುಭಹಾರೈಸಿದ್ದಾರೆ. ಮೀನುಗಾರರು ಸಮುದ್ರದಲ್ಲಿ ಬಲೆಹಾಕಿ ಹಿಡಿದು ತರುವ ಮತ್ಸ್ಯ ರಾಶಿಯು ನಾಡಿನ ಹಸಿವು ತಣಿಸುವುದು ಮಾತ್ರವಲ್ಲ ಲಕ್ಷಾಂತರ ಕುಟುಂಬಗಳ ಆದಾಯದ ಮೂಲವೂ ಇದಾಗಿದೆ ಮೀನುಗಾರರು, ಮೀನು ಮಾರಾಟಗಾರರು, ಸಾಗಾಟ ಮಾಡುವವರು, ಮೀನು ಹೊರುವವರು ಹೀಗೆ ಎಲ್ಲರ ಜೀವಕ್ಕೂ ಮೀನುಗಾರಿಕೆ ಆಧಾರವಾಗಿರುತ್ತದೆ. ಹೀಗೆ ಈ ಋತುವಿನ ಮೀನುಗಾರಿಕೆ ಸರ್ವರಿಗೂ ಹಿತ, ಆರ್ಥಿಕ ಶಕ್ತಿ ನೀಡಲಿ ಎಂದು ಪ್ರಕಟಣೆ ಮೂಲಕ ಶುಭ ಹಾರೈಸಿದ್ದಾರೆ.