ಶಿವಮೊಗ್ಗ : ಬಿಜೆಪಿಯ ಅಸಮಾಧಾನಿಕ 12 ಹಿರಿಯ ಮುಖಂಡರು ಸಭೆ ನಡೆಸಿ ಪಾದ ಯಾತ್ರೆಗೆ ನಿರ್ಧರಿಸಿದ್ದು, ತಕ್ಷಣವೇ ಕೇಂದ್ರ ನಾಯಕರು ಮಧ್ಯ ಪ್ರವೇಶಿಸಬೇಕು. ಇಲ್ಲದಿದ್ದರೆ ಪಕ್ಷ ಇಬ್ಬಾಗವಾಗುವ ಅಪಾಯವಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷರನ್ನು ಬಿಟ್ಟು ಈ ರೀತಿಯ ಸಭೆಗಳು ನಡೆಯುತ್ತಿವೆ. ಹೀಗೆ ಸಭೆಗಳನ್ನು ನಡೆಸುತ್ತ ಹೋದರೆ ಬಿಜೆಪಿ ಇಬ್ಬಾಗವಾಗುವ ಸಾಧ್ಯತೆ ಇದೆ. ಪ್ರತಿ ತಾಲೂಕಿನಲ್ಲೂ ಪಕ್ಷ ಇಬ್ಬಾಗವಾಗುವ ಸಾಧ್ಯತೆಯಿದೆ. ಸಭೆಯಲ್ಲಿ ಚರ್ಚಿಸಿರುವ ವಿಷಯದ ಬಗ್ಗೆ ಬಹಿರಂಗವಾಗಿ ಯಾರೂ ಏನೂ ಹೇಳುತ್ತಿಲ್ಲ. ಇವತ್ತು 12 ಜನರಿರಬಹುದು. ಪಕ್ಷದ ವರಿಷ್ಠರು ಇದನ್ನು ಕಡೆಗಣನೆ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಕುಂಠಿತವಾಗುತ್ತ ಹೋಗುತ್ತದೆ. ಕೂಡಲೇ ಕೇಂದ್ರದ ನಾಯಕರು ಈ ಬಗ್ಗೆ ಗಮನ ಹರಿಸಿ ಪಾದಯಾತ್ರೆಗೆ ಹೊರಟಿರುವ ಬಿಜೆಪಿ ನಾಯಕರನ್ನು ಕರೆದು, ಅವರ ನೋವುಗಳನ್ನು ಆಲಿಸಿ ಅಗತ್ಯ ಮುನ್ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.