ಬೈಂದೂರಿನ ಅಭಿವೃದ್ಧಿಗೆ ಪದೇಪದೇ ಅಡ್ಡಗಾಲು ಹಾಕುತ್ತಿರುವ ಕಾಂಗ್ರೆಸ್
ಕಾಂಗ್ರೆಸ್ ಗೆ ಬೈಂದೂರಿನ ಅಭಿವೃದ್ಧಿಯೇ ಬೇಕಾಗಿಲ್ಲ
ಶಾಸಕರು ಅಧಿಕಾರಿಗಳ ಸಭೆಯೇ ನಡೆಸಬಾರದು ಎಂಬ ಹಠಕ್ಕೆ ಕಾಂಗ್ರೆಸ್ ಬಿದ್ದಿರುವುದು ಸ್ಪಷ್ಟ
ಕೆಡಿಪಿ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ವರ್ತನೆಗೆ ಶಾಸಕರ ಆಕ್ರೋಶ
ಬೈಂದೂರು : ಬೈಂದೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯಬಾರದು ಮತ್ತು ಶಾಸಕರು ಅಧಿಕಾರಿಗಳ ಸಭೆ ನಡೆಸಬಾರದು ಎಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಹಾಗೂ ಅದರ ಕಾರ್ಯಕರ್ತರು ವಿನಾಕಾರಣ ಹಲವು ರೀತಿಯಲ್ಲಿ ಸಮಸ್ಯೆ ನೀಡುತ್ತಿದ್ದಾರೆ. ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಯಾರೇ ಅಡ್ಡಿ ಬಂದರೂ ಅದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಶಾಸಕರಾದ ಗುರುರಾಜ್ ಗಂಟೆಹೊಳೆಯವರು ತಿಳಿಸಿದರು.
ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ವರ್ತನೆಯನ್ನು ಖಂಡಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಕೆಡಿಪಿ ಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಮತ್ತು ಆಗಬೇಕಿರುವ ಕಾರ್ಯಗಳ ಮಾಹಿತಿ ವರದಿ ಇತ್ಯಾದಿಗಳನ್ನು ಪಡೆಯಲಾಗುತ್ತದೆ. ಶಾಸಕರೇ ಇದರ ಅಧ್ಯಕ್ಷರಾಗಿರುವುದರಿಂದ ಶಾಸಕರ ನೇತೃತ್ವದಲ್ಲಿ ಸಭೆ ನಡೆಯುತ್ತದೆ. ಅಭಿವೃದ್ಧಿಯ ವಿಷಯದಲ್ಲಿ ಕೈಜೋಡಿಸುವಂತೆ ಕಾಂಗ್ರೆಸ್ ಸದಸ್ಯರಲ್ಲೂ ಮನವಿ ಮಾಡಿದ ಮೇಲೂ ಕಾಂಗ್ರೆಸ್ ಸದಸ್ಯರು ಶಾಸಕರನ್ನೇ ಪ್ರಶ್ನಿಸುವುದೇ ದುರುದ್ದೇಶವಾದರೆ ಸಭೆಯಲ್ಲಿ ಅಧಿಕಾರಿಗಳ ಸಮಯ ವ್ಯರ್ಥವಾಗುತ್ತದೆ.
ಒಟ್ಟಿನಲ್ಲಿ ಕಾಂಗ್ರೆಸಿಗರಿಗೆ ಬೈಂದೂರು ಕ್ಷೇತ್ರದ ಅಭಿವೃದ್ಧಿ ಬೇಕಾಗಿಲ್ಲ. ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ನಾನು ನಡೆಸುತ್ತಿರುವ ಪ್ರಯತ್ನಗಳನ್ನು ಅವರು ವಿಫಲಗೊಳಿಸುವ ಯತ್ನ ನಡೆಸುತ್ತಿದ್ದಾರೆ. ಅವರ ಸರಕಾರ ಇರಬಹುದು, ಆದರೆ ಜನರು ಮತ ಹಾಕಿಸಿ ಜನಸೇವೆಗೆ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಾಗಿ ಇಂತಹ ಕೆಟ್ಟ ರಾಜಕಾರಣ ಮಾಡುವುದು ಸರಿಯಲ್ಲ. ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಎಲ್ಲರೂ ಒಂದಾಗಿ ಮುನ್ನಡೆಯಬೇಕು.
ರಾಜಕೀಯವೇ ಬೇರೆ ಅಭಿವೃದ್ಧಿಯೇ ಬೇರೆ. ರಾಜಕೀಯ ಮಾಡಲು ಹಲವು ವೇದಿಕೆಗಳಿವೆ. ಪಕ್ಷದ ಸೂಚನೆಯಂತೆ ಆ ವೇದಿಕೆಗಳಲ್ಲಿ ಏನೇ ಬೇಕಾದರೂ ಮಾಡಿಕೊಳ್ಳಲಿ ಆದರೆ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದು, ಅಧಿಕಾರಿಗಳ ಸಭೆಯನ್ನೇ ನಡೆಸಬಾರದು ಎಂದು ಹಠಕ್ಕೆ ಬಿದ್ದು ಅದನ್ನು ತಡೆಯುವ ಎಲ್ಲಾ ಪ್ರಯತ್ನ ಮಾಡುವುದು ಇತ್ಯಾದಿ ಕಾಂಗ್ರೆಸ್ ಗೆ ಶೋಭೆ ತರುವಂತದ್ದಲ್ಲ ಎಂದು ಕಿಡಿ ಕಾರಿದರು.
ಸಿಡಿದೆದ್ದ ಶಾಸಕರು
ಕೆಡಿಪಿ ಸಭೆ ಎಂದರೆ ಅಭಿವೃದ್ಧಿ ವಿಷಯಗಳ ಬಗ್ಗೆಯೇ ಚರ್ಚೆ.ಅಲ್ಲಿ ರಾಜಕೀಯಕ್ಕೆ ಅವಕಾಶ ಇರುವುದಿಲ್ಲ ಮತ್ತು ರಾಜಕೀಯ ಮಾಡಲೂ ಬಿಡುವುದಿಲ್ಲ. ಅಭಿವೃದ್ಧಿ ವಿಚಾರವಾಗಿ ಸಲಹೆಗಳಿದ್ದರೆ ನೀಡಲಿ ಅದನ್ನು ಬಿಟ್ಟು ಸಭೆ ನಡೆಸಬಾರದು, ಯಾಕೆ ಸಭೆ ನಡೆಸಬೇಕು ಎಂಬ ಈತ್ಯಾದಿಗಳನ್ನು ಪ್ರಶ್ನೆ ಮಾಡಲು ಅವಕಾಶ ಇಲ್ಲ ಎಂದು ಕೆಲವು ಸದಸ್ಯರ ವಿರುದ್ಧ ಸಿಡಿದೆದ್ದ ಶಾಸಕರು. ಶಾಸಕರಿಗೆ ಯಾವುದೇ ಕಾರಣಕ್ಕೂ ಕೆಲಸ ಮಾಡಲು ಬಿಡಬಾರದು ಎನ್ನುವ ಹಠಕ್ಕೆ ಬೈಂದೂರು ಕಾಂಗ್ರೆಸ್ ಬಿದ್ದಂತಿದೆ. ತನ್ಮೂಲಕ ಬೈಂದೂರು ಕ್ಷೇತ್ರದ ಅಭಿವೃದ್ಧಿಯನ್ನು ಕಾಂಗ್ರೆಸ್ ಸಹಿಸುತ್ತಿಲ್ಲ ಎಂದರು
ಸಭೆ ನಡೆಸುವುದೇ ತಪ್ಪೆ?
ಅಭಿವೃದ್ಧಿ ವಿಷಯವಾಗಿ ಚರ್ಚೆ ಮಾಡಬಾರದೆ ? ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಯ ಯಾವುದಾದರೂ ವಿಷಯವನ್ನು ಪದೇ ಪದೇ ಪ್ರಗತಿ ಪರಿಶೀಲನೆ ಮಾಡಬಾರದೆ ? ಅಥವಾ ಅಧಿಕಾರಿಗಳ ಸಭೆ ಮಾಡಬಾರದೇ ? ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ನಾವು ನಡೆಸುವ ಕಾರ್ಯವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಶಾಸಕರು ಹೇಳಿದರು.