ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆ ಸಂಬಂಧ ವರ್ಷದ ಬಳಿಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ 28 ಮಂದಿ ಬಿಜೆಪಿ ನಾಯಕರ ವಿರುದ್ಧ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಆರೋಪಿತರ ಪಟ್ಟಿಯಲ್ಲಿ ಬೊಮ್ಮಾಯಿ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ.ಮೋಹನ್, ಶಾಸಕರಾದ ಎಸ್.ಮುನಿರಾಜು, ಕೃಷ್ಣಪ್ಪ ಹಾಗೂ ಎನ್.ರವಿಕುಮಾರ್ ಸೇರಿದಂತೆ ಪ್ರಮುಖ ನಾಯಕರು ಸೇರಿದ್ದಾರೆ.
ಕಳೆದ ವರ್ಷದ ಜೂನ್ನಲ್ಲಿ ನಗರದ ಮೌರ್ಯ ವೃತ್ತ ಬಳಿ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಆದರೆ ಈ ಪ್ರತಿಭಟನೆಗೆ ಪೊಲೀಸರಿಂದ ಪೂರ್ವಾನುಮತಿ ಪಡೆಯದ ಆರೋಪದ ಮೇರೆಗೆ ಈಗ ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ದಾಖಲಾಗಿದೆ. ಮೊದಲು ಗಂಭೀರ ಸ್ವರೂಪವಲ್ಲದ ಕೃತ್ಯ (ಎನ್ಸಿಆರ್) ಎಂದು ಹೈಗೌಂಡ್ಸ್ ಠಾಣೆ ಪೊಲೀಸರು ವರದಿ ಮಾಡಿದ್ದರು. ಬಳಿಕ ಈ | ಪ್ರತಿಭಟನೆ ಸಂಬಂಧ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಬಿಜೆಪಿ ನಾಯಕರ ಮೇಲೆ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಿದ್ದಾರೆ.