ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶವನ್ನು ಪ್ರಶ್ನಿಸಿ ಒಂದೆಡೆ ಕಾಂಗ್ರೆಸ್ ಕಾನೂನು ಸಮರದ ಜತೆಗೆ ರಾಜ್ಯಾದ್ಯಂತ ಪ್ರತಿಭಟನೆಗೂ ಮುಂದಾಗಿದೆ. ಸೋಮವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಜ್ಯಪಾಲರ ಆದೇಶದ ವಿರುದ್ದ ಪ್ರತಿಭಟನೆ ನಡೆಸಲಿದೆ. ವಿಶೇಷವಾಗಿ ಮೈಸೂರು ಬಂದ್ ಗೂ ಕರೆ ನೀಡಲಾಗಿದೆ. ಈ ಬಗ್ಗೆ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸೋಮವಾರ ರಾಜ್ಯಪಾಲರ ಆದೇಶದ ವಿರುದ್ಧ ಎಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಕಾಂಗ್ರೆಸ್ನಿಂದ ಮೈಸೂರು ಬಂದ್
ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ. ವಿವಾದವೇ ಅಲ್ಲದ ವಿಚಾರವನ್ನು ದೊಡ್ಡದು ಮಾಡಲು ರಾಜ್ಯಪಾಲರು ಮುಂದಾಗಿದ್ದಾರೆ. ಹಾಗಾಗಿ, ರಾಜ್ಯಪಾಲರ ಆದೇಶದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದರು. ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭ ಬೇಕೆಂದೆ ಕೆಲ ಕಿಡಿಗೇಡಿ ಗಳು ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ನಡೆಸಬಹುದು. ಆದರೆ, ನಮ್ಮ ಹೋರಾಟದ ಮಾರ್ಗ ಮಾತ್ರ ಗಾಂಧಿಜಿಯ ಅಹಿಂಸಾ ಮಾದರಿಯದ್ದಾಗಿದೆ ಎಂದು ಘೋಷಿಸಿದರು. ಇನ್ನು ವಿಶೇಷವಾಗಿ, ಮೈಸೂರಿನಲ್ಲಿ ಬಂದ್ ಮಾಡಲು ಅಹಿಂದಾ ಸಂಘಟನೆಗಳು, ಶೋಷಿತ ವರ್ಗದ ಸಂಘಟನೆಗಳು ಸಿದ್ದರಾಮಯ್ಯರವರ ಅಭಿಮಾನಿಗಳು ಕರೆ ನೀಡಿವೆ ಎಂದು ತಿಳಿಸಿದರು.