ಬೆಂಗಳೂರು : ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಖಂಡಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಚಿವರು, ಶಾಸಕರು ಸೇರಿ ಕಾಂಗ್ರೆಸ್ ನಾಯಕರು ಬೀದಿಗಿಳಿದು ಸೋಮವಾರ ಪ್ರತಿಭಟನೆ ನಡೆಸಿದರು. ಮುಖ್ಯ ಮಂತ್ರಿ ಬೆನ್ನಿಗೆ ನಾವಿದ್ದೇವೆ ఎంబ ಸಂದೇಶ ರವಾನಿಸಿದರು. ರಾಜ್ಯಾದ್ಯಂತ ರಸ್ತೆ ತಡೆ, ರಾಜ್ಯಪಾಲರು, ಪ್ರಧಾನಿ ಮೋದಿ ಪ್ರತಿಕೃತಿ ದಹನ, ಶವಯಾತ್ರೆ ಮತ್ತು ಟೈರ್ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ರಾಜ್ಯಪಾಲರು, ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ವಿರುದ್ಧ ಕಿಡಿಕಾರಿದರು. ಇದೇ ವೇಳೆ ಮೆರವಣಿಗೆಯನ್ನೂ ನಡೆಸಿದ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿ, ತಹಸೀಲ್ದಾರ್ ಅವರ ಮೂಲಕ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದರು. ರಾಜ್ಯಪಾಲರ ವಿರುದ್ಧ ಗೋಬ್ಯಾಕ್ ಘೋಷಣೆ ಕೂಗಿದರು. ಬಿಜೆಪಿ ಮತ್ತು ಜೆಡಿಎಸ್ ರಾಜ್ಯಪಾಲರನ್ನು ಬಳಸಿಕೊಂಡು ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದೆ. ರಾಜ್ಯಪಾಲರು ಅಮಿತ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು