ಬೆಂಗಳೂರು : ಪ್ರತಿಪಕ್ಷಗಳ ಯಾವ ಹುನ್ನಾರಗಳಿಗೂ ನಮ್ಮ ಸರ್ಕಾರ ಬಗ್ಗುವುದಿಲ್ಲ, ಜಗ್ಗುವುದಿಲ್ಲ, ಹೆದರುವುದೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ನಾನು ಮಾತ್ರವಲ್ಲ ಇಡೀ ಇಂಡಿಯಾ ಒಕ್ಕೂಟ ಹಾಗೂ ಕಾಂಗ್ರೆಸ್ ಪಕ್ಷವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಖಂಡಿಸಿ ಬೆಂಗಳೂರಿನಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಮುಂದಿನ 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತದೆ. ಯಾವ ಹುನ್ನಾರಗಳಿಗೂ ಹೆದರುವುದಿಲ್ಲ. ನಮ್ಮ ಶಾಸಕರನ್ನು ಖರೀದಿಸಲು ಬಿಜೆಪಿಗೆ ಸಾಧ್ಯವಿಲ್ಲ. ರಾಜ್ಯಪಾಲರೇ ನಿಮಗೆ ಇನ್ನೂ ಸಾಕಷ್ಟು ಸಮಯವಿದೆ. ಸರ್ಕಾರದ ವಿರುದ್ಧ ಒಳಸಂಚು ಬಿಟ್ಟು ಕೂಡಲೇ ಅನುಮತಿ ಹಿಂಪಡೆಯಿರಿ’ ಎಂದು ಆಗ್ರಹಿಸಿದರು.