Home » ದೇವಳದ ಹುಂಡಿ ಹಣ ಶಾಲೆಯಲ್ಲಿಟ್ಟ ಕಳ್ಳ
 

ದೇವಳದ ಹುಂಡಿ ಹಣ ಶಾಲೆಯಲ್ಲಿಟ್ಟ ಕಳ್ಳ

by Kundapur Xpress
Spread the love

ಕುಂದಾಪುರ : ಸಮೀಪದ ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇಗುಲದ ಹುಂಡಿಯಿಂದ ಕದ್ದ ಚಿಲ್ಲರೆ ನೋಟುಗಳಿದ್ದ ಚೀಲವೊಂದು ಸಮೀಪದ ಪ್ರಾಥಮಿಕ ಶಾಲೆಯಲ್ಲಿ ಪತ್ತೆ ಯಾಗಿದೆ. ಶುಕ್ರವಾರ ತಡರಾತ್ರಿ ಹೆಮ್ಮಾಡಿಯ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಕನ್ನ ಹಾಕಿದ್ದ ಅಪರಿಚಿತ ಕಳ್ಳ, ದೇಗುಲದ ಹುಂಡಿ ಹಣ ಸತ್ಯನಾರಾಯಣ ಪೂಜೆಯ ಸಂಗ್ರಹಿತ ಹಣವನ್ನು ಕೊಂಡೊಯ್ಯುವ ದೃಶ್ಯಗಳು  ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಸಹಕಾರದಿಂದ ತನಿಖೆ ಮುಂದುವರಿಸಿದ್ದರು.

ದೇವಸ್ಥಾನದ ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆಯ ವರಾಂಡದ ಜಗುಲಿಯ ಮೇಲೆ ಶನಿವಾರ ಹಸಿರು ಬಣ್ಣದ ಚೀಲವೊಂದು ಇದ್ದುದನ್ನು ಗಮನಿಸಿದ್ದ ಶಿಕ್ಷಕರು, ಈ ಬಗ್ಗೆ ಅಷ್ಟೇನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸೋಮವಾರ ಚೀಲವನ್ನು ಗಮನಿಸಿದ ವಿದ್ಯಾರ್ಥಿಗಳು ಚೀಲವನ್ನು ಬಿಡಿಸಿದಾಗ ಅದರಲ್ಲಿ ಹಣ ಇರುವುದು ಗಮನಕ್ಕೆ ಬಂದಿದೆ. ದೇವಸ್ಥಾನದ ಕಳವಿನ ಮಾಹಿತಿ ಇದ್ದ ಮುಖ್ಯ ಶಿಕ್ಷಕರು, ಕೂಡಲೇ ದೇವಸ್ಥಾನದ ಆಡಳಿತ ಮಂಡಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಆಡಳಿತ ಮಂಡಳಿಯವರು ಕುಂದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಕುಂದಾಪುರ ಅಪರಾಧ ವಿಭಾಗದ ಪಿಎಸ್‌ಐ ಪುಷ್ಪಾ ಹಾಗೂ ಸಿಬ್ಬಂದಿ ಹಣವನ್ನು ವಶಕ್ಕೆ ಪಡೆದುಕೊಂಡುಕೊಂಡು ತನಿಖೆ ಮುಂದುವರಿಸಿದ್ದಾರೆ

   

Related Articles

error: Content is protected !!